ಕುಂಬಳೆ: ಕುಂಬಳೆಯಲ್ಲಿ ನಿರ್ಮಾಣ ನಡೆಯುತ್ತಿರುವ ಟೋಲ್ ಬೂತ್ ವಿರುದ್ಧ ರೂಪೀಕರಿಸಲಾದ ಟೋಲ್ ವಿರುದ್ಧ ಕ್ರಿಯಾ ಸಮಿತಿಯಲ್ಲಿ ಸಿಪಿಎಂ ಏರಿಯಾ ಸೆಕ್ರೆಟರಿ ಸಿ.ಎ. ಸುಬೈರ್ ಏಕಾಧಿಪತ್ಯ ಚಟುವಟಿಕೆ ನಡೆಸುತ್ತಿದ್ದಾರೆಂದು ಎಸ್ಡಿಪಿಐ ಕುಂಬಳೆ ಪಂಚಾಯತ್ ಸಮಿತಿ ಅಧ್ಯಕ್ಷ ನಾಸರ್ ಬಂಬ್ರಾಣ ಆರೋಪಿಸಿದ್ದಾರೆ.
ಸೋಮವಾರ ಮಧ್ಯಾಹ್ನ ಕುಂಬಳೆ ಪಂಚಾಯತ್ ಹಾಲ್ನಲ್ಲಿ ಕ್ರಿಯಾ ಸಮಿತಿ ಕನ್ವೀನರ್ ಯು.ಪಿ. ತಾಹಿರರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಸ್ಡಿಪಿಐಯನ್ನು ಕ್ರಿಯಾಸಮಿತಿಯಿಂದ ಹೊರ ಹಾಕುವ ಕುರಿತು ಯಾವುದೇ ಚರ್ಚೆ ನಡೆದಿಲ್ಲ. ಚಳವಳಿಯ ಭವಿಷ್ಯದ ಕುರಿತು ಚರ್ಚೆ ನಡೆಸಿ ೨೪ರಿಂದ ಧರಣಿ ನಡೆಸಲು ತೀರ್ಮಾನಿಸಲಾಗಿತ್ತು. ಈ ಸಭೆಯಲ್ಲಿ ಎಸ್ಡಿಪಿಐ ಪ್ರತಿನಿಧಿಗಳಿದ್ದರು. ಸಭೆ ಕೊನೆಗೊಂಡ ಬಳಿಕ ರಾತ್ರಿ ೧೧ ಗಂಟೆಗೆ ಸಿಪಿಎಂ ಏರಿಯಾ ಸೆಕ್ರೆಟರಿ ಸುಬೈರ್ ವಾಟ್ಸಪ್ ಗ್ರೂಪ್ಗಳಲ್ಲಿ ಎಸ್ಡಿಪಿಐಯನ್ನು ಕ್ರಿಯಾ ಸಮಿತಿಯಿಂದ ಹೊರ ಹಾಕಿರುವುದಾಗಿ ಪ್ರಚಾರಗೈದಿದ್ದಾರೆ. ಕ್ರಿಯಾ ಸಮಿತಿ ಹೆಸರಲ್ಲಿ ನಡೆಯುವ ನಿಯಂತ್ರಣ ಸಹಿತ ಇತರ ನಿರ್ಧಾರಗಳು ಅಂಗೀಕರಿಸುವಂತದ್ದಲ್ಲ. ಟೋಲ್ ವಿರುದ್ಧ ಚಳವಳಿ ಸಾರ್ವಜನಿಕರ ಸಹಕಾರದೊಂದಿಗೆ ನಡೆಯಬೇಕಾಗಿದೆ. ಆದರೆ ಪಕ್ಷದ ಪರವಾದ ಅಧಿಕಾರ ಉಪಯೋಗಿಸಿ ಏಕಪಕ್ಷೀಯ ಸಮಿತಿಯ ಚಟುವಟಿಕೆಗಳನ್ನು ನಿಯಂತ್ರಿಸಲು ಪ್ರಯತ್ನಿಸುವುದನ್ನು ಅಂಗೀಕರಿಸಲಾಗದು ಎಂದು ಎಸ್ಡಿಪಿಐ ತಿಳಿಸಿದೆ.