ಕಾಸರಗೋಡು: ಕೊಲೆಯತ್ನ ಪ್ರಕರಣದ ಆರೋಪಿಗಳ ಪೈಕಿ ಓರ್ವನಿಗೆ ತಲೆಮರೆಸಿಕೊಳ್ಳಲು ಸಂರಕ್ಷಣೆ ಒದಗಿಸಿದ ಆರೋಪದಂತೆ ಯುವತಿ ಸೇರಿ ಇಬ್ಬರನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕ ಕಡಬ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಉಪ್ಪಿನಂಗಡಿ ನಿವಾಸಿಗಳಾದ ರುಬೀನಾ (27) ಮತ್ತು ಅಬೂಬಕ್ಕರ್ ಸಿದ್ದೀಕ್ ಸಿ.ಕೆ. (41) ಬಂಧಿತರಾದ ಆರೋಪಿಗಳು. ಉಪ್ಪಿನಂಗಡಿಯಿಂದ ಇವರನ್ನು ಪೊಲೀಸರು ಬಂಧಿಸಿದ್ದಾರೆ. ಚೆಂಗಳ ಗ್ರಾಮ ಚೆರ್ಕಳ ನೋರ್ತ್ನ ಕೋಳಿಕ್ಕರ ಹೌಸಿನ ಮೊಹಮ್ಮದ್ ನವಾಸ್ (32) ಎಂಬವರನ್ನು ಕಳೆದ ಜುಲೈ ೨೪ರಂದು ರಾತ್ರಿ ಕಾರಿನಲ್ಲಿ ಬಂದ ನಾಲ್ವರ ತಂಡ ಚೆರ್ಕಳ ಪೇಟೆಯ ಸೂಪರ್ ಮಾರ್ಕೆಟ್ ಒಂದರ ಬಳಿ ತಡೆದು ನಿಲ್ಲಿಸಿ ಕೊಲೆ ಬೆದರಿಕೆ ಒಡ್ಡಿ ಅದರಲ್ಲಿ ಓರ್ವ ನವಾಸ್ರಿಗೆ ಚಾಕುವಿನಿಂದ ಇರಿದು ಇತರ ಮೂವರು ಕಬ್ಬಿಣದ ಸರಳಿನಿಂದ ಹೊಡೆದು ಗಾಯಗೊಳಿಸಿದ ದೂರಿನಂತೆ ಇರ್ಷಾದ್, ಶಬೀರ್, ಹಾಶಿಂ ಸೇರಿದಂತೆ ಒಟ್ಟು ನಾಲ್ವರ ವಿರುದ್ಧ ವಿದ್ಯಾನಗರ ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದರು. ಈ ಪೈಕಿ ಒಂದನೇ ಆರೋಪಿಗೆ ತಲೆಮರೆಸಿಕೊಂಡು ಜೀವಿಸಲು ತಮ್ಮ ಮನೆಯಲ್ಲಿ ಸಂರಕ್ಷಣೆ ನೀಡಿದ ಆರೋಪದಂತೆ ರುಬೀನಾ ಮತ್ತು ಅಬೂಬಕ್ಕರ್ ಸಿದ್ದೀಕ್ರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
