ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಗಾಗಿ ತಲುಪಿದ ಕಾರ್ಮಿಕರ ಮಧ್ಯೆ ನಡೆದ ಘರ್ಷಣೆಯಲ್ಲಿ ಇಬ್ಬರಿಗೆ ಇರಿತ ಉಂಟಾಗಿದೆ. ಮೇಘ ಕನ್‌ಸ್ಟ್ರಕ್ಷನ್ ಕಂಪೆನಿಯ ಮೈಲಾಟಿಯಲ್ಲಿರುವ ಲೇಬರ್ ಕ್ಯಾಂಪ್‌ನಲ್ಲಿ ನಿನ್ನೆ ಸಂಜೆ ಘರ್ಷಣೆ ನಡೆದಿದೆ. ಉತ್ತರ ಭಾರತ ನಿವಾಸಿಗಳಾದ ಯತಿವೀಂದರ್ ಸಿಂಗ್, ಗುರ್ಬಾ ಸಿಂಗ್ ಎಂಬಿವರು ಇರಿತದಿಂದ ಗಾಯಗೊಂಡಿದ್ದಾರೆ. ಈ ಪೈಕಿ ಓರ್ವನನ್ನು ಮಂಗಳೂರಿನ ಆಸ್ಪತ್ರೆಯಲ್ಲೂ, ಇನ್ನೋರ್ವನನ್ನು ಕಾಞಂಗಾಡ್‌ನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಕಾರ್ಮಿಕರ ಮಧ್ಯೆ ನಡೆದ ವಾಗ್ವಾದವೇ ಘರ್ಷಣೆಯಲ್ಲಿ ಕೊನೆಗೊಂಡಿದೆ ಎಂದು ಹೇಳಲಾಗುತ್ತಿದೆ. ವಿಷಯ ತಿಳಿದು ಬೇಕಲ ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದ್ದಾರೆ. ಇದೇ ವೇಳೆ ಆರೋಪಿಗಳೆಂದು ಪೊಲೀಸರು ಸಂಶಯಿಸುವ ಇಬ್ಬರು ಸ್ಥಳದಿಂದ ನಾಪತ್ತೆಯಾಗಿದ್ದಾರೆ. ಪಂಜಾಬ್ ನಿವಾಸಿಗಳಾದ ರಂಜಿತ್ ಸಿಂಗ್, ಪುತ್ರ ಹಾರ್ಸಿಂ ರಂಜಿತ್ ಸಿಂಗ್ ಎಂಬಿವರು ನಾಪತ್ತೆಯಾಗಿರುವುದಾಗಿ ಹೇಳಲಾಗುತ್ತಿದೆ. ಇವರನ್ನು ಪತ್ತೆಹಚ್ಚಲು ಬೇಕಲ ಪೊಲೀಸರು ತನಿಖೆ ಆರಂಭಿಸಿದ್ದಾರೆ.
