ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು 75 ವಸಂತಕ್ಕೆ ಕಾಲಿರಿಸಿದ್ದು, ಇದರ ಅಂಗವಾಗಿ ಬಿಜೆಪಿಯು ದೇಶದಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಹುಟ್ಟುಹಬ್ಬದ ಸಲುವಾಗಿ ಕೇಂದ್ರ ಸರಕಾರವು ಇಂದಿನಿಂದ ಪೋಷಣ್ ಮಾಹ್ ಜೊತೆಗೆ ಸ್ವಸ್ಥನಾರಿ, ‘ಸಶಕ್ತ್ ಪರಿವಾರ್’ ಅಭಿಯಾನಕ್ಕೂ ಚಾಲನೆ ನೀಡಿದೆ. ಇದರ ಹೊರತಾಗಿ ಬಿಜೆಪಿ ಮತ್ತು ಯುವಮೋರ್ಚಾದ ನೇತೃತ್ವದಲ್ಲಿ ಆರೋಗ್ಯ ತಪಾಸಣಾ ಶಿಬಿರಗಳು, ರಕ್ತದಾನದಿಂದ ಹಿಡಿದು ಹಲವು ಕಾರ್ಯಕ್ರಮಗಳನ್ನು ಹುಟ್ಟುಹಬ್ಬದಂಗವಾಗಿ ದೇಶಾದ್ಯಂತವಾಗಿ ಹಮ್ಮಿಕೊಳ್ಳಲಾಗಿದೆ. ಇನ್ನು ಬಿಜೆಪಿ ನೇತೃತ್ವದಲ್ಲಿರುವ ರಾಜ್ಯಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನೂ ಇಂದಿನಿಂದ ಆರಂಭಿಸಲಾಗಿದ್ದು, ಇದು ಅಕ್ಟೋಬರ್ 2 (ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ) ತನಕ ಮುಂದುವರಿಯಲಿದೆ. ಬಿಜೆಪಿ ಮತ್ತು ಯುವಮೋರ್ಚಾದ ನೇತೃತ್ವದಲ್ಲಿ ದೇಶದ 75 ಪ್ರಧಾನ ನಗರಗಳಲ್ಲಿ ‘ನಮೋ ಯುವ ರನ್’ ಹೆಸರಲ್ಲಿ ಮ್ಯಾರಥಾನ್ ಆಯೋಜಿಸಲಾಗಿದೆ. ಇದರಲ್ಲಿ ಪ್ರತಿ ಕಡೆ 10,000ಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದಾರೆ. ಇನ್ನು ಪಶ್ಚಿಮಬಂಗಾಳದಲ್ಲಿ ಒಂದುವಾರ ನರೇಂದ್ರ ಮೋದಿಯವರ ಜೀವನದ ಕುರಿತು ಪ್ರದರ್ಶನಗಳನ್ನು ಆಯೋಜಿಸಲಾಗಿದೆ. ಮೋದಿ ಯವರ ಜನ್ಮದಿನದ ಸಲುವಾಗಿ ಪುಣೆಯಲ್ಲಿ ವಿಮಾನಯಾನ ಖಾತೆ ರಾಜ್ಯ ಸಚಿವ ಮುರಳೀಧರನ್ ಮೊಹೋಲ್‌ರ ನೇತೃತ್ವದಲ್ಲಿ ಡ್ರೋನ್ ಲೇಸರ್ ಶೋ ಆಯೋಜಿಸಲಾಯಿತು. ಇದರಲ್ಲಿ ಮೋದಿಯವರ ಕುರಿತು ಪ್ರದರ್ಶನವೂ ನಡೆಯಿತು. ಮೋದಿಯ ಹುಟ್ಟುಹಬ್ಬವನ್ನು ದೇಶಾದ್ಯಂತವಾಗಿ ಬಿಜೆಪಿ ಹಲವು ಕಾರ್ಯಕ್ರಮಗಳೊಂದಿಗೆ ವಿಜೃಂಬಭಣೆಯಿಂದ ಆಯೋಜಿಸುತ್ತಿದೆ.
