ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಗುತ್ತಿಗೆದಾರರಾದ ಮೇಘ ಕನ್ಸ್ಟ್ರಕ್ಷನ್ ಕಂಪೆನಿಯ ಲೇಬರ್ ಕ್ಯಾಂಪ್ನಲ್ಲಿ ಇಬ್ಬರು ಕಾರ್ಮಿಕರಿಗೆ ಇರಿದು ಗಾಯಗೊಳಿಸಿ ಪರಾರಿಯಾದ ತಂದೆ ಹಾಗೂ ಪುತ್ರನನ್ನು ಮಹಾರಾಷ್ಟ್ರದಿಂದ ಸೆರೆ ಹಿಡಿಯಲಾಗಿದೆ. ಪಂಜಾಬ್ ನಿವಾಸಿಗಳಾದ ರಂಜಿತ್ ಸಿಂಗ್, ಪುತ್ರ ಹರ್ಸಿಂ ರಂಜಿತ್ ಸಿಂಗ್ ಎಂಬಿವರನ್ನು ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಜಿಪ್ಲೂನ್ ರೈಲ್ವೇ ನಿಲ್ದಾಣದಿಂದ ಬಂಧಿಸಲಾಗಿದೆ. ಮೊನ್ನೆ ಸಂಜೆ ಈ ಇಬ್ಬರು ಮೈಲಾಟಿಯ ಲೇಬರ್ ಕ್ಯಾಂಪ್ನಲ್ಲಿ ಇಬ್ಬರು ಕಾರ್ಮಿಕರಿಗೆ ಇರಿದು ಗಾಯಗೊಳಿಸಿದ್ದರು. ಉತ್ತರ ಭಾರತ ನಿವಾಸಿಗಳಾದ ಯತಿವೀಂದರ್ ಸಿಂಗ್, ಗುರ್ಬಾ ಸಿಂಗ್ ಎಂಬಿವರಿಗೆ ಇರಿದು ಗಾಯಗೊಳಿಸಲಾಗಿದೆ. ಘರ್ಷಣೆ ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದರು. ವಿಷಯ ಲಭಿಸಿದ ಬೇಕಲ ಇನ್ಸ್ಪೆಕ್ಟರ್ ಎಂ.ವಿ. ಶ್ರೀದಾಸ್ರ ನೇತೃತ್ವದಲ್ಲಿ ತನಿಖೆ ತೀವ್ರಗೊಳಿಸಲಾಗಿತ್ತು. ಆರೋಪಿಗಳು ರೈಲುಗಾಡಿಯಲ್ಲಿ ಜಿಲ್ಲೆಯಿಂದ ಪರಾರಿಯಾಗಲು ಸಾಧ್ಯತೆ ಇದೆ ಎಂದು ಮನಗಂಡು ಪೊಲೀಸ್ ಆರ್ಪಿಎಫ್ ಹಾಗೂ ರೈಲ್ವೇ ಪೊಲೀಸ್ಗೆ ಮಾಹಿತಿ ನೀಡಿದ್ದರು. ನಾಗರ್ಕೋವಿಲ್- ಗಾಂಧೀದಾಮ್ ಎಕ್ಸ್ಪ್ರೆಸ್ನಲ್ಲಿ ಆರೋಪಿಗಳು ಹತ್ತಿದ್ದಾರೆಂದು ಸೂಚನೆ ಲಭಿಸಿದ ಹಿನ್ನೆಲೆಯಲ್ಲಿ ಗೋವಾದ ಆರ್ಪಿಎಫ್ಗೆ ಮಾಹಿತಿ ನೀಡಲಾಗಿತ್ತು.
ಕಾಸರಗೋಡು ರೈಲ್ವೇ ಪೊಲೀಸ್ ಎಸ್ಎಚ್ಒ ರೆಜಿ ಕುಮಾರ್, ಇಂಟೆಲಿಜೆನ್ಸ್ ಆಫೀಸರ್ ಜ್ಯೋತಿಷ್ ಕುಮಾರ್, ಆರ್ಪಿಎಫ್ ಎಸ್ಐ ಸುನಿಲ್, ಎಚ್.ಸಿ. ಸತ್ತಾರ್, ಸಿಪಿಒ ಬಿಬಿನ್ ಮ್ಯಾಥ್ಯು, ಕಲ್ಲಿಕೋಟೆ ಐಆರ್ಪಿ ತೆಫ್ಟ್ಸ್ಕ್ವಾಡ್ ನೇತೃತ್ವದಲ್ಲಿ ಆರೋಪಿಗಳನ್ನು ಹಿಡಿಯಲು ಕ್ರಮ ಕೈಗೊಳ್ಳಲಾಗಿತ್ತು. ನಿನ್ನೆ ಸಂಜೆ 6 ಗಂಟೆಗೆ ಚಿಪ್ಲೋನ್ ರೈಲು ನಿಲ್ದಾಣದಲ್ಲಿ ರೈಲಿನಿಂದಿಳಿದ ಆರೋಪಿಗಳನ್ನು ಆರ್ಪಿಎಫ್ ಕಸ್ಟಡಿಗೆ ತೆಗೆದುಕೊಂಡಿದೆ. ಈ ಬಗ್ಗೆ ಮಾಹಿತಿ ಲಭಿಸಿದ ಬೇಕಲ ಇನ್ಸ್ಪೆಕ್ಟರ್ ಎಂ.ವಿ. ಶ್ರೀದಾಸ್ ನೇತೃತ್ವದ ತಂಡ ಅಲ್ಲಿಗೆ ತೆರಳಿ ಆರೋಪಿಗಳನ್ನು ಕಸ್ಟಡಿಗೆ ತೆಗೆದುಕೊಂಡಿದೆ. ಇರಿತದಿಂದ ಗಾಯಗೊಂಡ ಓರ್ವ ಮಂಗಳೂರಿನ ಆಸ್ಪತ್ರೆಯಲ್ಲೂ, ಇನ್ನೋರ್ವ ಕಾಞಂಗಾಡ್ನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ.