ಕಾಸರಗೋಡು: ಜಿಲ್ಲೆಯ ವಿದ್ಯುತ್ ವಿತರಣಾ ವಲಯದ ಅಭಿವೃದ್ಧಿಗಾಗಿ ಕಾಸರಗೋಡು ಸ್ಪೆಷಲ್ ಪ್ಯಾಕೇಜ್ನಿಂದ 395.15 ಕೋಟಿ ರೂ. ಮಂಜೂರು ಮಾಡಲಾಗಿದೆಯೆಂದು ವಿಧಾನಸಭೆಯಲ್ಲಿ ವಿದ್ಯುತ್ ಖಾತೆ ಸಚಿವ ಕೆ. ಕೃಷ್ಣನ್ ಕುಟ್ಟಿ ತಿಳಿಸಿದ್ದಾರೆ.
ಜಿಲ್ಲೆ ಎದುರಿಸುತ್ತಿರುವ ವಿದ್ಯುತ್ ಸಮಸ್ಯೆಗಳ ಬಗ್ಗೆ ಕಾಸರಗೋಡು ಶಾಸಕ ಎನ್.ಎ. ನೆಲ್ಲಿಕುನ್ನು ವಿಧಾನಸಭೆಯಲ್ಲಿ ಮಂಡಿಸಿದ ಪ್ರಶ್ನೆಗಳಿಗೆ ಉತ್ತರಿಸುತ್ತಾ ಸಚಿವರು ಈ ಪ್ರತಿಕ್ರಿಯೆ ನೀಡಿದ್ದಾರೆ.
ಹೀಗೆ ಮಂಜೂರು ಮಾಡಲಾ ಗಿರುವ ಹಣನ್ನು ವಿನಿಯೋಗಿಸಿ ಜಿಲ್ಲೆಯಲ್ಲಿ ತಲೆದೋರಿರುವ ವಿದ್ಯುತ್ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಅಗತ್ಯದ ಕ್ರಮಗಳಿಗೆ ಈಗಾಗಲೇ ಚಾಲನೆ ನೀಡಲಾಗಿದೆ. ಇದರಂತೆ ಅನಂತಪುರ, ಸೀತಾಂಗೋಳಿ ಮತ್ತು ಮಡಿಕೈ ಉದ್ದಿಮೆ ಉದ್ಯಾನಗಳಲ್ಲಿ 110 ಕೆ.ವಿ ಸಾಮರ್ಥ್ಯದ ವಿದ್ಯುತ್ ಸಬ್ ಸ್ಟೇಶನ್ಗಳನ್ನು ನಿರ್ಮಿಸುವ ಕ್ರಮಕ್ಕೂ ಚಾಲನೆ ನೀಡಲಾಗಿದೆ.
ಕರಿಂದಳಂನಲ್ಲಿ 400 ಕೆ.ವಿ ಸಾಮರ್ಥ್ಯದ ವಿದ್ಯುತ್ ಸಬ್ ಸ್ಟೇಶನ್ ನಿರ್ಮಿಸಲಾಗುತ್ತಿದೆ. ಇದರ ನಿರ್ಮಾಣ ಕೆಲಸ ಪೂರ್ಣಗೊಂಡಲ್ಲಿ ಜಿಲ್ಲೆಯ ವಿದ್ಯುತ್ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಉಂಟಾಗಲಿ ದೆಯೆಂದೂ ಸಚಿವರು ತಿಳಿಸಿದ್ದಾರೆ. ಕಾಸರಗೋಡು ಜಿಲ್ಲೆಯ ವಿದ್ಯುತ್ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಲು ಹಾಗೂ ಅವುಗಳಿಗೆ ಪರಿಹಾರ ಕಂಡುಕೊಳ್ಳಲು ತಜ್ಞರು ಒಳಗೊಂಡ ಸಮಿತಿಗೆ ರೂಪು ನೀಡುವ ವಿಷಯ ಸರಕಾರದ ಪರಿಗಣನೆಯಲ್ಲಿದೆ. ಜಿಲ್ಲೆಯ ಕೈಗಾರಿಕಾಭಿವೃದ್ಧಿಗೆ ವಿದ್ಯುತ್ ಸಮಸ್ಯೆ ಒಂದು ದೊಡ್ಡ ಸಮಸ್ಯೆಯಾಗಿ ನಿಂತಿದೆ ಎಂಬ ವಿಷಯ ಸರಕಾರದ ಗಮನಕ್ಕೆ ಬಂದಿದೆ 2032ರೊಳಗಾಗಿ ಕಾಸರಗೋಡು ಮಾತ್ರವಲ್ಲ ಕೇರಳದ ಇತರ ಜಿಲ್ಲೆಗಳ ವಿದ್ಯುತ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಯೋಜನೆಗೂ ರೂಪು ನೀಡಲಾಗಿದೆಯೆಂದು ಸಚಿವರು ತಿಳಿಸಿದ್ದಾರೆ.