ಮಂಜೇಶ್ವರ: ಮಂಜೇಶ್ವರ, ಬೇಕಲ, ಚಿತ್ತಾರಿ, ನೀಲೇಶ್ವರ ಸೇರಿದಂತೆ ಉತ್ತರ ಕೇರಳದ ನೂರು ವರ್ಷಕ್ಕಿಂತ ಹಳೆಯದಾದ 10 ರೈಲ್ವೇ ಸೇತುವೆಗಳನ್ನು ಕೆಡವಿ ಹೊಸ ಸೇತುವೆಗಳನ್ನು ನಿರ್ಮಿಸಲು ರೈಲ್ವೇ ಇಲಾಖೆ ತೀರ್ಮಾನಿಸಿದೆ. ಇವು ಬ್ರಿಟೀಷ್ ಕಾಲದಲ್ಲಿ ನಿರ್ಮಿಸಲಾಗಿರುವ ರೈಲ್ವೇ ಸೇತುವೆಗಳಾಗಿವೆ. ಜ್ಯಾರಿಯ ಲ್ಲಿರುವುದಕ್ಕಿಂತಲೂ ಹೆಚ್ಚು ಹಳಿಗಳನ್ನು ನಿರ್ಮಿಸಲು ಸಾಧವಾಗುವ ರೀತಿಯ ವಿಸ್ತೀರ್ಣದಲ್ಲಿ ಈ ಹೊಸ ಸೇತುವೆಗಳನ್ನು ನಿರ್ಮಿಸಲಾಗುವುದು. ಈ ಸೇತುವೆಗಳನ್ನು ರೈಲ್ವೇ ಇಲಾಖೆಯೇ ನೇರವಾಗಿ ನಿರ್ಮಿಸಲಿದೆ.
ರೈಲುಗಳ ವೇಗದ ಮಿತಿಯನ್ನು 130 ಕಿಲೋ ಮೀಟರ್‌ಗೇರಿಸುವ ರೀತಿಯಲ್ಲಿ ಮಂಗಳೂರು-ಶೊರ್ನೂರು ನಡುವಿನ ರೈಲು ಹಳಿಗಳನ್ನು ಇದರೊಂದಿಗೆ ನವೀಕರಿಸಲಾಗುವುದು. ರೈಲ್ವೇ ಹಳಿ ನವೀಕರಿಸುವ 2016ರ ಯೋಜನೆಯಲ್ಲಿ ಒಳಪಡಿಸಿ 115ಕ್ಕಿಂತಲೂ ಹೆಚ್ಚು ಹಳೆಯ ಶಿರಿಯ, ಕೂಡಕಡವು, ಧರ್ಮಡಂ ಮತ್ತು ಕಾರ್ಯಂಗೋಡು ರೈಲು ಸೇತುವೆಗಳನ್ನು ಒಡೆದು ಹೊಸ ಸೇತುವೆಗಳನ್ನು ನಿರ್ಮಿಸಲಾಗಿತ್ತು. ಅದರ ಮುಂದುವರಿಕೆಯಾಗಿ ಈಗ ಮಂಜೇಶ್ವರ ಸೇರಿದಂತೆ ಉತ್ತರ ಕೇರಳದ 10 ಹಳೆ ರೈಲು ಸೇತುವೆಗಳನ್ನು ನವೀಕರಿಸುವ ತೀರ್ಮಾನವನ್ನು ಈಗ ಹಾಕಿಕೊಳ್ಳಲಾಗಿದೆ.
ಇದರ ಹೊರತಾಗಿ ರಾಜ್ಯದಲ್ಲಿ ಇತರ ಎಲ್ಲಾ ರೈಲ್ವೇ ಸೇತುವೆಗಳ ದೃಢತೆಯನ್ನು ಪರಿಶೀಲಿಸಲಾ ಗುವುದು. ಆಧುನಿಕ ರಿಮೋಟ್ ಓಪರೇಟರ್ ರೋಬಿಟಿಕ್ ವೆಹಿಕಲ್ (ಆರ್ ಒಆರ್‌ವಿ)ಯ ಸಹಾಯದೊಂದಿಗೆ ಇವುಗಳನ್ನು ಪರಶೀಲಿಸಲಾಗುವುದು. ಹೀಗೆ ಪರಿಶೀಲನೆ ನಡೆಸಿದ ಬಳಿಕ ಅದರ ಆಧಾರದಲ್ಲಿ ರೈಲು ಸೇತುವೆಗಳ ದುರಸ್ತಿ ಕೆಲಸಗಳನ್ನು ನಡೆಸಲು ರೈಲ್ವೇ ಇಲಾಖೆ ತೀರ್ಮಾನಿಸಿದೆ.