ಕಾಸರಗೋಡು: ರಾತ್ರಿ ವೇಳೆ ಪಟ್ರೋಲಿಂಗ್ ನಡೆಸುತ್ತಿದ್ದ ಬೇಡಗಂ ಪೊಲೀಸ್ ಠಾಣೆಯ ಜೀಪಿಗೆ ಆಲ್ಟೋ ಕಾರು ಮೂರು ಬಾರಿ ಢಿಕ್ಕಿ ಹೊಡೆಸಿದ ಘಟನೆ ನಡೆದಿದೆ. ಮೂರನೇ ಬಾರಿ ಹೊಡೆದ ಢಿಕ್ಕಿಯಿಂದ ಪೊಲೀಸ್ ವಾಹನ ಮಗುಚಿ ಬಿದ್ದಿದ್ದು, ಈ ವೇಳೆ ಕಾರು ಸಹಿತ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಈ ಘಟನೆಯಲ್ಲಿ ಪೊಲೀಸ್ ಜೀಪ್ ಚಾಲಕ ರಾಕೇಶ್ ಎಂಬವರ ಕೈಗೆ ಗಾಯಗಳಾಗಿವೆ. ಢಿಕ್ಕಿ ಹೊಡೆದು ಪರಾರಿಯಾದ ಕಾರನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ನಿನ್ನೆ ರಾತ್ರಿ 11.30 ರ ವೇಳೆ ನಡೆದ ಘಟನೆ ಕುರಿತು ಪೊಲೀಸರು ಈ ರೀತಿ ತಿಳಿಸುತ್ತಿದ್ದಾರೆ. “ಓರ್ವ ಎಎಸ್ಐ ನೇತೃತ್ವದಲ್ಲಿ ಪೊಲೀಸರು ಪಟ್ರೋಲಿಂಗ್ ನಡೆಸುತ್ತಿದ್ದರು. ಪಳ್ಳತ್ತುಂಗಾಲ್ ಎಂಬಲ್ಲಿಗೆ ತಲುಪಿದಾಗ ಆಲ್ಟೋ ಕಾರು ಬಂದಿದೆ. ನಿಲ್ಲಿಸುವಂತೆ ಕೈ ತೋರಿಸಿದರೂ ಅದು ಪರಾರಿಯಾಗಿದೆ. ಸಂಶಯಗೊಂಡು ಪೊಲೀಸರು ತಮ್ಮ ವಾಹನದಲ್ಲಿ ಕಾರನ್ನು ಹಿಂಬಾಲಿಸಿದ್ದಾರೆ. ಕುಟ್ಟಿಕ್ಕೋಲ್ಗೆ ತಲುಪಿದಾಗ ಪೊಲೀಸ್ ವಾಹನ ಕಾರನ್ನು ಹಿಂದಿಕ್ಕಿದೆ. ಅದನ್ನು ತಡೆದು ನಿಲ್ಲಿಸಲೆತ್ನಿಸುವ ವೇಳೆ ಕಾರು ಪೊಲೀಸ್ ವಾಹನಕ್ಕೆ ಢಿಕ್ಕಿ ಹೊಡೆದ ಬಳಿಕ ಬಂದಡ್ಕ ಭಾಗಕ್ಕೆ ಅಪರಿಮಿತ ವೇಗದಲ್ಲಿ ಪರಾರಿಯಾಗಿದೆ. ಈ ವೇಳೆ ಕಾರನ್ನು ಹಿಂಬಾಲಿಸಿದ ಪೊಲೀಸ್ ವಾಹನಕ್ಕೆ ಬಂದಡ್ಕದಲ್ಲೂ ಕಾರನ್ನು ಢಿಕ್ಕಿ ಹೊಡೆಸಲಾಗಿದೆ. ಅನಂತರವೂ ನಿಲ್ಲಿಸದೇ ಹೋದ ಕಾರು ಕುಟ್ಟಿಕೋಲ್ ಭಾಗಕ್ಕೆ ತೆರಳಿತ್ತು.
ಪೊಲೀಸರು ಹಿಂಬಾಲಿಸಿದಾಗ ಪಳ್ಳತ್ತುಂಗಾಲ್ಗೆ ತಲುಪಿ ಚುಳ್ಳಿಕರೆ ಭಾಗಕ್ಕೆ ಕಾರು ಪರಾರಿಯಾಗಿತ್ತು. ಪೊಲೀಸ್ ವಾಹನ ಅದನ್ನು ಹಿಂಬಾಲಿಸಿ ಅಲ್ಪ ದೂರಕ್ಕೆ ಸಂಚರಿಸಿದಾಗ ಎದುರು ಭಾಗದಿಂದ ಮತ್ತೊಂದು ವಾಹನ ಬಂದಿದೆ. ಈ ವೇಳೆ ಕಾರನ್ನು ಹಿಂದಿಕ್ಕಲು ಪೊಲೀಸ್ ವಾಹನ ಪ್ರಯತ್ನಿಸಿದಾಗ ಮತ್ತೆ ಅದೇ ಕಾರು ಢಿಕ್ಕಿ ಹೊಡೆದಿದೆ. ಈ ವೇಳೆ ಪೊಲೀಸ್ ವಾಹನ ರಸ್ತೆ ಬದಿಗೆ ಮಗುಚಿ ಬಿತ್ತು. ಅಪಘಾತದಲ್ಲಿ ಪೊಲೀಸ್ ಜೀಪ್ ಚಾಲಕ ಗಾಯಗೊಂಡಿದ್ದಾರೆ. ಪೊಲೀಸ್ ವಾಹನಕ್ಕೂ ಹಾನಿಯುಂಟಾಗಿದೆ. ಅನಂತರ ಕಾರು ಯಾವ ಭಾಗಕ್ಕೆ ಸಂಚರಿಸಿದೆ ಎಂದು ತಿಳಿದು ಬಂದಿಲ್ಲ. ಕಾರು ಚಲಾಯಿಸಿದ ವ್ಯಕ್ತಿಯ ಹೊರತು ಓರ್ವ ಯುವತಿಯೂ ಕಾರಿನೊಳಗಿದ್ದಳು. ವಿಷಯ ತಿಳಿದು ಹೆಚ್ಚಿನ ಸಂಖ್ಯೆಯ ಪೊಲೀಸರು ತಲುಪಿ ಕಾರನ್ನು ಪತ್ತೆಹಚ್ಚಲು ತನಿಖೆ ನಡೆಸಿದರೂ ಪ್ರಯೋಜನವುಂಟಾಗಿಲ್ಲ. ಕಾರಿನ ನಂಬ್ರ ಕೇಂದ್ರೀಕರಿಸಿ ತನಿಖೆ ಮುಂದುವರಿಯುತ್ತಿದೆ” ಎಂದು ಪೊಲೀಸರು ತಿಳಿಸಿದ್ದಾರೆ.