ಪಂಪಾ: ಜಾಗತಿಕ ಅಯ್ಯಪ್ಪ ಸಂಗಮ ಕಾರ್ಯಕ್ರಮಕ್ಕೆ ಪಂಪಾದಲ್ಲಿ ಅದ್ದೂರಿಯ ಚಾಲನೆ ದೊರಕಿದೆ. ಇಂದು ಬೆಳಿಗ್ಗೆ ಮುಜರಾಯಿ ಸಚಿವ ವಿ.ಎನ್. ವಾಸನ್‌ರ ಅಧ್ಯಕ್ಷತೆಯಲ್ಲಿ ಆರಂಭಗೊಂಡ ಸಂಗಮ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸಿ ದರು. ಜರ್ಮನ್ ತಂತ್ರಜ್ಞಾನದಿಂದ ನಿರ್ಮಿಸಲಾದ ಹವಾನಿಯಂತ್ರಿತವಾದ ಮೂರು ವೇದಿಕೆಗಳಲ್ಲಾಗಿ ಈ ಸಂಗಮ ಕಾರ್ಯಕ್ರಮ ನಡೆಯುತ್ತಿದೆ. ತಿರುವಿ ದಾಂಕೂರ್ ಮುಜರಾಯಿ ಮಂಡಳಿ ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದರಲ್ಲಿ ದೇಶ ವಿದೇಶಗಳಿಂದಾಗಿ ಆಯ್ದ 3500 ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ. ಕೇರಳದ ಹಲವು ಸಚಿವರುಗಳು ಮಾತ್ರವಲ್ಲದೆ, ತಮಿಳು ನಾಡಿನ ಸಚಿವರುಗಳಾದ ಪಳನಿ ವೇಲ್ ತ್ಯಾಗರಾಜನ್, ಪಿ.ಕೆ. ಶೇಖರ್ ಬಾಬು, ಎನ್‌ಎಸ್‌ಎಸ್ ಉಪಾಧ್ಯಕ್ಷ ಎಂ. ಸಂಗೀತ್ ಕುಮಾರ್, ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ವೆಳ್ಳಾಪಳ್ಳಿ ನಟೇಶನ್ ಸೇರಿದಂತೆ ಇತರ ಹಲವು ಸಮುದಾಯ ಸಂಘಟನೆಗಳ ಪ್ರತಿನಿಧಿಗಳು ಇದರಲ್ಲಿ ಭಾಗವಹಿಸುತ್ತಿ ದ್ದಾರೆ. ಆದರೆ ಪಂದಳಂ ಅರಮನೆ ಈ ಕಾರ್ಯಕ್ರಮದಿಂದ ದೂರ ಸರಿದು ನಿಂತಿದೆ.
ಶಬರಿಮಲೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಶಬರಿಮಲೆಯನ್ನು ಜಾಗತಿಕ ಆಧ್ಯಾತ್ಮಿಕ ತೀರ್ಥಾಟನಾ ಕೇಂದ್ರವನ್ನಾಗಿಸುವುದೇ ಈ ಅಯ್ಯಪ್ಪ ಸಂಗಮದ ಪ್ರಧಾನ ಉದ್ದೇಶವಾಗಿದೆ ಎಂದು ತಿರುವಿದಾಂಕೂರ್ ದೇವಸ್ವಂ ಮಂಡಳಿ ಅಧ್ಯಕ್ಷರು ತಿಳಿಸಿದ್ದಾರೆ. ಅಯ್ಯಪ್ಪ ಸಂಗಮ ಎಡರಂಗದ ರಾಜಕೀಯ ಸಂಗಮವಾಗಿದೆ ಎಂದು ಇದೇ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಟಿ. ರಮೇಶ್ ಹೇಳಿದ್ದಾರೆ. ಅಯ್ಯಪ್ಪ ಸಂಗಮ ನಡೆಸುವ ವಿಷಯದಲ್ಲಿ ಹೈಕೋರ್ಟ್ ಮುಂದಿರಿಸಿದ ಪ್ರಶ್ನೆಗಳಿಗೆ ಉತ್ತರ ನೀಡಲು ಸರಕಾರಕ್ಕೆ ಸಾಧ್ಯವಾಗಿಲ್ಲ. ಈ ಕಾರ್ಯಕ್ರಮ ಕೇವಲ ಒಂದು ನಾಟಕವಾಗಿದೆ ಎಂದು ಅವರು ಹೇಳಿದ್ದಾರೆ.
ಜಾಗತಿಕ ಅಯ್ಯಪ್ಪ ಸಂಗಮಕ್ಕೆ ಶ್ರೀ ಅಯ್ಯಪ್ಪ ದೇವರ ಅನುಗ್ರಹವಿಲ್ಲ, ಬದಲಾಗಿ ಶಾಪವಿದೆ ಎಂದು ಇನ್ನೊಂದೆಡೆ ಬಿಜೆಪಿ ನೇತಾರ ಮಾಜಿ ಕೇಂದ್ರ ಸಚಿವ ವಿ. ಮುರಳೀಧರನ್ ಹೇಳಿದ್ದಾರೆ. ಈ ಸಂಗಮ ಕಾರ್ಯಕ್ರಮದಲ್ಲಿ ಅಯ್ಯಪ್ಪ ದೇವರನ್ನು ವೋಟ್ ಬ್ಯಾಂಕ್ ಆಗಿ ಸರಕಾರ ಉಪಯೋಗಿಸುತ್ತಿದೆ. ಈ ಕಾರ್ಯಕ್ರಮದ ಹಿಂದೆ ಬಾರೀ ವಂಚನೆ ಅಡಗಿದೆ. ಅದನ್ನು ಮುಂದೆ ಬಹಿರಂಗಪಡಿಸಲಾಗುವುದೆಂದು ಅವರು ಹೇಳಿದ್ದಾರೆ. ಅಯ್ಯಪ್ಪ ದೇವರನ್ನು ಟೂರಿಸ್ಟ್ ಬ್ರಾಂಡ್ ಅಂಬಾಸಿಡರ್ ರನ್ನಾಗಿಸುವ ಯತ್ನವನ್ನು ರಾಜ್ಯ ಸರಕಾರ ನಡೆಸುತ್ತಿದೆ. ಅದು ಬೇಡ. ರಾಜಕೀಯ ಉದ್ದೇಶದಿಂದ ಎಡರಂಗ ಸರಕಾರ ಈ ಕಾರ್ಯಕ್ರಮ ನಡೆಸುತ್ತಿದೆ. ಅದು ಮುಂದೆ ಯುಡಿಎಫ್‌ಗೆ ಅನುಕೂಲಕರವಾಗಲಿದೆ ಎಂದು ಕಾಂಗ್ರೆಸ್‌ನ ಹಿರಿಯ ನೇತಾರ ಕೆ. ಮುರಳೀಧರನ್ ಹೇಳಿದ್ದಾರೆ. ಅಯ್ಯಪ್ಪ ಸಂಗಮ ಕಾರ್ಯಕ್ರಮದಲ್ಲಿ ಯಾವುದೇ ರಾಜಕೀಯವಿಲ್ಲವೆಂದು ಇದೇ ಸಂದರ್ಭದಲ್ಲಿ ತಿರುವಿದಾಂಕೂರು ಮುಜರಾಯಿ ಮಂಡಳಿಯ ಅಧಿಕಾರಿಗಳು ಹೇಳಿದ್ದಾರೆ.
ಶಬರಿಮಲೆ ಜಾತ್ಯತೀತ ಕೇಂದ್ರ: ಅಭಿವೃದ್ಧಿಯೇ ಅಯ್ಯಪ್ಪ ಸಂಗಮದ ಗುರಿ-ಮುಖ್ಯಮಂತ್ರಿ
ಪತ್ತನಂತಿಟ್ಟ: ಶಬರಿಮಲೆಯನ್ನು ತಿರುಪತಿ, ಮಧುರೈ ದೇವಸ್ಥಾನಗಳಂತೆ ವಿಶ್ವ ಭೂಪಟದಲ್ಲಿ ತೀರ್ಥಾಟನಾ ಕೇಂದ್ರವನ್ನಾಗಿ ಮಾಡುವುದು ಅಯ್ಯಪ್ಪ ಸಂಗಮದ ಉದ್ದೇಶವೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನುಡಿದರು. ಅವರು ಪಂಪಾದಲ್ಲಿ ಇಂದು ಬೆಳಿಗ್ಗೆ ನಡೆದ ಅಯ್ಯಪ್ಪ ಸಂಗಮ ಉದ್ಘಾಟಿಸಿ ಮಾತನಾಡಿದರು. ಭಗವದ್ಗೀತೆಯ ಶ್ಲೋಕವನ್ನು ಉದ್ಘರಿಸಿ ಮಾತನಾಡಿದ ಅವರು ಭಕ್ತನೆಂದರೆ ಹೇಗಿರಬೇಕು ಎಂಬುವುದರ ವ್ಯಾಖ್ಯಾನ ನೀಡಿದರು.ಶಬರಿಮಲೆ ಜಾತ್ಯಾತೀತ ಕೇಂದ್ರವಾಗಿದೆಯೆಂದು ಅಭಿಪ್ರಾಯಪಟ್ಟರು. ಶಬರಿಮಲೆಗೆ ಪ್ರತ್ಯೇಕ ಇತಿಹಾಸವಿದ್ದು ಅದು ದಮನಿತರ ಪರವಾಗಿದೆಯೆಂದರು. ವಿವಿಧ ಧರ್ಮೀಯರ ಸಂಗಮ ಕೇಂದ್ರದಂತಿದೆ ಶಬರಿಮಲೆ ಎಂದ ಮುಖ್ಯಮಂತ್ರಿ ಸರ್ವಧರ್ಮ ಸಮಭಾವನೆಯ ಈ ರೀತಿಯ ಕೇಂದ್ರ ದೇಶದಲ್ಲೇ ಅಪರೂಪವೆಂದು ಮುಖ್ಯಮಂತ್ರಿ ನುಡಿದರು. ಶಬರಿಮಲೆಯನ್ನು ಅಭಿವೃದ್ಧಿಗೊಳಿಸಬೇಕಾದ ಅಲ್ಲಿ ಅಗತ್ಯದ ಸೌಕರ್ಯಗಳನ್ನು ಹೆಚ್ಚಿಸಬೇಕಾದ , ಅಗತ್ಯಗಳನ್ನು ಅವರು ಒತ್ತಿ ಹೇಳಿದರು.