ಉಪ್ಪಳ: ಪತ್ನಿಯ ಮನೆಗೆ ಬಂದ ಯುವಕ ತೊಟ್ಟಿಲಿನ ಹಗ್ಗದಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ ಯಾಗಿದ್ದಾನೆ. ಕರ್ನಾಟಕದ ಬೆಳ್ತಂಗಡಿ ದಿಡುಪೆ ಸಿಂಗನಾರ್ ಎಂಬಲ್ಲಿನ ದಿ| ಎಲ್ಯಣ್ಣ ಎಂಬವರ ಪುತ್ರ ಎಸ್.ಎ. ಸುರೇಶ್ (34) ಮೃತಪಟ್ಟ ವ್ಯಕ್ತಿ. ಎರಡು ದಿನಗಳ ಹಿಂದೆ ಸುರೇಶ್ ಬಾಯಾರು ಬಳಿ ಬಲಿಪಗುರಿ ಮೇಗಿನಪಂಜದಲ್ಲಿರುವ ಪತ್ನಿ ಮನೆಗೆ ಬಂದಿದ್ದರು. ನಿನ್ನೆ ಮಧ್ಯಾಹ್ನ ಮನೆ ಕೊಠಡಿಗೆ ಹೋದ ಇವರು ದೀರ್ಘ ಹೊತ್ತಾದರೂ ಹೊರಗೆ ಬಾರದ ಹಿನ್ನೆಲೆಯಲ್ಲಿ ಮನೆಯವರು ನೋಡಿದಾಗ ಬಾಗಿಲು ಒಳಗಿನಿಂದ ಚಿಲಕ ಹಾಕಿದ ಸ್ಥಿತಿಯ ಲ್ಲಿತ್ತು. ಕರೆದರೂ ಪ್ರತಿಕ್ರಿಯಿಸದ ಹಿನ್ನೆಲೆಯಲ್ಲಿ ಬಾಗಿಲು ತೆರೆದು ನೋಡಿದಾಗ ತೊಟ್ಟಿಲಿನ ಹಗ್ಗಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಸುರೇಶ್ ಪತ್ತೆಯಾಗಿದ್ದರು. ಕೂಡಲೇ ಅವರನ್ನು ಕೆಳಗಿಳಿಸಿ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.
ಮೃತರು ತಾಯಿ ಗುಲಾಬಿ, ಪತ್ನಿ ರಾಜೇಶ್ವರಿ, ಮಕ್ಕಳಾದ ಆದ್ಯ, ತುಷಾರ್, ಸಹೋದರ ರಮೇಶ, ಓರ್ವೆ ಸಹೋದರಿ ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.