ಕಾಸರಗೋಡು: ಜಿಲ್ಲೆಯಲ್ಲಿ ಅಡಿಕೆ ಕೃಷಿಕರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಕುರಿತು ಕಿಸಾನ್ ಸೇನೆ ಜಿಲ್ಲಾ ಸಮಿತಿ ಸಲ್ಲಿಸಿದ ಮನವಿ ಮೇರೆಗೆ ರಾಜ್ಯದ ಕೃಷಿ ತಜ್ಞರು, ಅಧಿಕಾರಿಗಳು ವಿವಿಧೆಡೆಗೆ ಭೇಟಿ ನೀಡಿ ಪರಿಸ್ಥಿತಿಯ ಕುರಿತು ಅವಲೋಕನ ನಡೆಸಿದರು.
ತಿರುವನಂತಪುರ ಕೃಷಿ ಇಲಾಖೆಯ ಹೆಚ್ಚುವರಿ ನಿರ್ದೇಶಕರು, ಜಂಟಿ ನಿರ್ದೇಶಕರು, ಕಾಸರಗೋಡು ಜಿಲ್ಲಾ ಮುಖ್ಯ ಕೃಷಿ ಅಧಿಕಾರಿ, ಹೆಚ್ಚುವರಿ ಕೃಷಿ ಅಧಿಕಾರಿ, ತಿರುವನಂತಪುರ ವೆಳ್ಳಾಯಿನಿ ಕೃಷಿ ಕಾಲೇಜಿನ ಪ್ರತಿನಿಧಿಗಳು, ಕಾಸರ ಗೋಡು ಸಿಪಿಆರ್‌ಐಯ ವಿಜ್ಞಾನಿಗಳು, ಪಡನ್ನಕ್ಕಾಡ್ ಕೃಷಿ ಕಾಲೇಜಿನ ಪ್ರಾಧ್ಯಾಪಕರು ಮೊದಲಾದವರು ಕುಂಟಾರು ಸಹಿತ ವಿವಿಧ ಭಾಗಗಳಿಗೆ ನಿನ್ನೆ ಭೇಟಿ ನೀಡಿದ್ದಾರೆ. ಕಿಸಾನ್ ಸೇನೆ ಜಿಲ್ಲಾಧ್ಯಕ್ಷ ಗೋವಿಂದ ಭಟ್ ಕೊಟ್ಟಂಗುಳಿ, ಮುಖ್ಯ ಪೋಷಕ ಕಲ್ಲಗ ಚಂದ್ರಶೇಖರ ರಾವ್, ಕೋಶಾಧಿಕಾರಿ ರಾಜೇಂದ್ರ ಪ್ರಸಾದ್, ಕಾರ್ಯದರ್ಶಿ ಸಚಿನ್ ಎಂ.ಪಿ. ಎಂಬಿವರು ಅಧಿಕಾರಿ ಗಳೊಂದಿಗಿದ್ದರು. ಅಡಿಕೆಗೆ ಬಾಧಿಸುವ ಕೊಳೆರೋಗ ಸಹಿತ ವಿವಿಧ ಸಮಸ್ಯೆಗಳ ಕುರಿತು ಇವರು ಅಧಿಕಾರಿಗಳ ಗಮನಕ್ಕೆ ತಂದರು. ಈ ಕುರಿತು ಸೂಕ್ತ ಪರಿಹಾರ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಜಿಲ್ಲೆಯ ವಿವಿಧೆಡೆ ಅಡಿಕೆ ಕೃಷಿಗೆ ಬಾಧಿಸುವ ವಿವಿಧ ರೋಗಗಳಿಂದಾಗಿ ಕೃಷಿಕರು ಭಾರೀ ಸಮಸ್ಯೆ ಹಾಗೂ ನಷ್ಟವನ್ನು ಎದುರಿಸಬೇಕಾಗಿ ಬಂದಿದೆ. ಅದ್ದರಿಂದ ಕೃಷಿಕರ ಸಮಸ್ಯೆಗೆ ಪರಿಹಾರ ಕಾಣಬೇಕೆಂದು ಒತ್ತಾಯಿಸಿ ಕಿಸಾನ್ ಸೇನೆ ಜಿಲ್ಲಾ ಸಮಿತಿ ಇತ್ತೀಚೆಗೆ ಶಾಸಕ ಎನ್.ಎ. ನೆಲ್ಲಿಕುನ್ನುರವರಿಗೆ ಮನವಿ ಸಲ್ಲಿಸಿತ್ತು. ಅನಂತರ ರಾಜ್ಯ ವಿಧಾನಸಭೆಯಲ್ಲಿ ಕಾಸರಗೋಡಿನ ಅಡಿಕೆ ಕೃಷಿಕರ ಸಮಸ್ಯೆಗಳನ್ನು ಶಾಸಕರು ವಿಧಾನಸಭೆಯಲ್ಲಿ ಮಂಡಿಸಿ ಸರಕಾರದ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಕೃಷಿ ಸಚಿವ ಪಿ. ಪ್ರಸಾದ್ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ನಿರ್ದೇಶಿಸಿದ್ದರು. ಇದರಂತೆ ಇದೀಗ ಕೃಷಿ ಅಧಿಕಾರಿಗಳು, ತಜ್ಞರು ವಿವಿಧೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.