ಕಾಸರಗೋಡು: ದೀರ್ಘ ಕಾಲದ ಕಾಯುವಿಕೆ ಬಳಿಕ ಚಟುವಟಿಕೆ ಆರಂಭಿಸುವ ಕಾಸರಗೋಡು ಮೆಡಿಕಲ್ ಕಾಲೇಜ್‌ನಲ್ಲಿ ಕೊನೆಗೂ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದೆ. ಉಕ್ಕಿನಡ್ಕದ ಕಾಸರಗೋಡು ಮೆಡಿಕಲ್ ಕಾಲೇಜ್‌ನ ಮೊದಲ ಎಂಬಿಬಿಎಸ್ ವಿದ್ಯಾರ್ಥಿ ನಿನ್ನೆ ಪ್ರವೇಶ ಪಡೆದಿದ್ದಾರೆ. ರಾಜಸ್ತಾನ ನಿವಾಸಿ ಗೋವಿಂದರ್ ಸಿಂಗ್ ನಿನ್ನೆ ಪ್ರವೇಶ ಪಡೆದ ವಿದ್ಯಾರ್ಥಿಯಾಗಿದ್ದಾರೆ. ಅವರನ್ನು ಅಧಿಕಾರಿಗಳು ಸಿಹಿ ನೀಡಿ ಸ್ವಾಗತಿಸಿದರು.
2013 ಆಗಸ್ಟ್ 7ರಂದು ಶಿಲಾನ್ಯಾಸ ನಡೆದ ಕಾಲೇಜ್‌ನಲ್ಲಿ ತರಗತಿಗಳಿಗೆ ಅಗತ್ಯವುಳ್ಳ ಮೂಲಭೂತ ಸೌಕರ್ಯಗಳು ಪೂರ್ತಿಗೊಂಡ ಹಿನ್ನೆಲೆಯಲ್ಲಿ ಈ ವರ್ಷವೇ ತರಗತಿ ಆರಂಭಿಸಲು ರಾಷ್ಟ್ರೀಯ ಮೆಡಿಕಲ್ ಕೌನ್ಸಿಲ್ ಅನುಮತಿ ನೀಡಿತ್ತು. ಅನುಮತಿ ಲಭಿಸಲು ಅಲ್ಪ ವಿಳಂಬವಾದ ಹಿನ್ನೆಲೆಯಲ್ಲಿ ಮೊದಲ ಹಂತದ ಅಲೋಟ್‌ಮೆಂಟ್‌ನಲ್ಲಿ ಕಾಸರಗೋಡು ಸರಕಾರಿ ಮೆಡಿಕಲ್ ಕಾಲೇಜ್‌ನ್ನು ಸೇರಿಸಿರಲಿಲ್ಲ. 2 ಹಾಗೂ 3ನೇ ಅಲೋಟ್‌ಮೆಂಟ್‌ನಲ್ಲಿ ಉಳಿದ ವಿದ್ಯಾರ್ಥಿಗಳು ಇಲ್ಲಿಗೆ ತಲುಪಲಿದ್ದಾರೆ. ಎಂಬಿಬಿಎಸ್‌ಗೆ 50 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ರಾಷ್ಟ್ರೀಯ ಮೆಡಿಕಲ್ ಕೌನ್ಸಿಲ್ ಅನುಮತಿ ನೀಡಿದೆ. 30ರ ಮೊದಲು ಪ್ರವೇಶ ಪೂರ್ತಿಗೊಳ್ಳಲಿದೆಯೆಂದು ನಿರೀಕ್ಷಿಸಲಾಗಿದೆ. ಇದೇ ವೇಳ ಕಾಸರಗೋಡು ಮೆಡಿಕಲ್ ಕಾಲೇಜ್‌ಗಾಗಿ ಬೇಡಿಕೆ ಮುಂದಿರಿಸಿದವರು ಎಂಬಿಬಿಎಸ್ ಶಿಕ್ಷಣಕ್ಕೆ ಅರ್ಹತೆಯುಳ್ಳ ಅವರ ಮಕ್ಕಳನ್ನು, ಸಂಬಂಧಿಕರನ್ನು, ಪಕ್ಷದವರ ಮಕ್ಕಳನ್ನು ಕಾಸರಗೋಡು ಮೆಡಿಕಲ್ ಕಾಲೇಜ್‌ನ ಮೊದಲ ಬ್ಯಾಚ್‌ನಲ್ಲಿ ಸೇರಿಸಲು ಮುಂದಾಗಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಪ್ರಸಿದ್ಧ ಕಾಲೇಜುಗಳಲ್ಲಿ ಅವರು ಸೀಟ್ ಕಾದಿರಿಸಿರಬಹುದೆಂದು ಹೇಳಲಾಗುತ್ತಿದೆ. ಅದೇನಿದ್ದರೂ ಎಂಬಿಬಿಎಸ್‌ಗೆ ಕಾಸರಗೋಡು ಮೆಡಿಕಲ್ ಕಾಲೇಜ್‌ನಲ್ಲಿ ಪ್ರವೇಶ ಆರಂಭಗೊಳ್ಳುವುದರೊಂದಿಗೆ ದೀರ್ಘಕಾಲದ ಬೇಡಿಕೆ ಇದೀಗ ಈಡೇರಿದಂತಾಗಿದೆ.