ಕಾಸರಗೋಡು: ಆಟೋರಿಕ್ಷಾಕ್ಕೆ ಕಾರು ಢಿಕ್ಕಿ ಹೊಡೆದು ಆಟೋದಲ್ಲಿದ್ದ ವಿದ್ಯಾರ್ಥಿಗಳು ಗಾಯಗೊಂಡಿರುವು ದನ್ನು ಕಂಡ ಪ್ರಸ್ತುತ ಆಟೋ ಚಾಲಕ ಆಸಿಡ್ ಸೇವಿಸಿ ಆತ್ಮಹತ್ಯೆಗೈದ ಘಟನೆ ನಡೆದಿದೆ. ಬೇತೂರುಪಾರ ಸಮೀಪದ ಪಳ್ಳಿಂಜಿ ನಿವಾಸಿ ದಿ| ಶೇಖರನ್ ನಾಯರ್- ಕಮಲಾಕ್ಷಿ ದಂಪತಿ ಪುತ್ರ ಕೆ. ಅನೀಶ್ (40) ಸಾವನ್ನಪ್ಪಿದ ಆಟೋ ಚಾಲಕನಾಗಿದ್ದಾರೆ.
ಬೇತೂರುಪಾರ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಮೂವರು ವಿದ್ಯಾರ್ಥಿಗಳನ್ನು ಹೇರಿ ಕೊಂಡು ಅನೀಶ್ ತನ್ನ ಆಟೋರಿಕ್ಷಾ ದಲ್ಲಿ ನಿನ್ನೆ ಬೇತೂರು ಪಾರದಿಂದ ಪಳ್ಳಂಜಿಗೆ ಹೋಗುತ್ತಿದ್ದ ದಾರಿ ಮಧ್ಯೆ ಆ ದಾರಿಯಾಗಿ ಹಿಂದಿನಿಂದ ನಿಯಂತ್ರಣ ತಪ್ಪಿ ಬಂದ ಕಾರೊಂದು ಆಟೋರಿಕ್ಷಾಕ್ಕೆ ಢಿಕ್ಕಿ ಹೊಡೆದಿದೆ. ಅದರ ರಭಸಕ್ಕೆ ರಿಕ್ಷಾದ ಹಿಂಭಾಗ ನಜ್ಜುಗುಜ್ಜಾಗಿತ್ತಲ್ಲದೆ, ಅದರಲ್ಲಿ ಪ್ರಯಾಣಿಸುತ್ತಿದ್ದ ಪ್ಲಸ್ವನ್ ತರಗತಿಯ ವಿದ್ಯಾರ್ಥಿಗಳಾದ ಪಳ್ಳಂಜಿಯ ಶ್ರೀಹರಿ, ಅತುಲ್, ಆದರ್ಶ್ ಎಂಬ ವರು ಗಾಯಗೊಂಡರು. ತಕ್ಷಣ ಅವರನ್ನು ಚೆಂಗಳದ ಇ.ಕೆ. ನಾಯ ನಾರ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ವಿದ್ಯಾರ್ಥಿಗಳ ಗಾಯ ಅಷ್ಟೊಂದು ಗಂಭೀರವಾಗಿರಲಿಲ್ಲ. ಆದರೆ ಅಪಘಾತದಲ್ಲಿ ಗಾಯಗೊಂಡ ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾಗಿದೆ ಎಂದು ಗ್ರಹಿಸಿ ಅನೀಶ್ ತನ್ನ ಆಟೋರಿಕ್ಷಾದಲ್ಲಿದ್ದ ಆಸಿಡ್ ತೆಗೆದು ಅಲ್ಲೇ ಪಕ್ಕ ಸಾಗಿ ಸೇವಿಸಿದರೆಂದು ಹೇಳಲಾಗುತ್ತಿದೆ. ಇದರಿಂದ ಗಂಭೀರಾವಸ್ಥೆಗೆ ತಲುಪಿದ ಅನೀಶ್ರನ್ನು ಮೊದಲು ಕಾಸರಗೋಡಿನ ಆಸ್ಪತ್ರೆ ಯೊಂದಕ್ಕೂ ನಂತರ ಅಲ್ಲಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಉನ್ನತ ಮಟ್ಟದ ಚಿಕಿತ್ಸೆ ನೀಡಲಾಯಿತಾದರೂ ಅದು ಫಲಕಾರಿಯಾಗದೆ ಅವರು ಸಾವನ್ನಪ್ಪಿದರು. ಬೇಡಗ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಈ ಆಟೋ ರಿಕ್ಷಾಕ್ಕೆ ಢಿಕ್ಕಿ ಹೊಡೆದ ಕಾರನ್ನು ಚಲಾಯಿಸುತ್ತಿದ್ದ ಕಾಲೇಜೊಂದರ ಅಧ್ಯಾಪಕರಾದ ಬೆನೆಟ್ ಕೂಡಾ ಗಾಯಗೊಂಡಿದ್ದು, ಅವರಿಗೆ ಕುಟ್ಟಿಕ್ಕೋಲ್ನ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು.
ಮೃತರು ಪತ್ನಿ ವೀಣಾ, ಮಕ್ಕಳಾದ ಧೀರವ್, ಆರವ್, ಸಹೋದರ ರತೀಶ್, ಸಹೋದರಿ ಲಲಿತಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.