ಕಾಸರಗೋಡು: ಚೆಮ್ಮಟ್ಟಂವ ಯಲ್ ನಿವಾಸಿ ಹಾಗೂ ಕಾಞಂಗಾಡ್ ಕಾಲೇಜೊಂದರ ಪ್ರಥಮ ವರ್ಷ ವಿದ್ಯಾರ್ಥಿನಿಯಾದ 19ರ ಹರೆಯದ ಯುವತಿಯನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ತೀವ್ರಗೊಳಿಸಿದರು. ಕಾಸರಗೋಡು, ಕೊಲ್ಲಂಗಾನ ನಿವಾಸಿಯಾದ ರಶೀದ್‌ನ ಜೊತೆ ತೆರಳಿರುವುದಾಗಿ ಶಂಕಿಸುತ್ತಿರುವುದಾಗಿ ತಾಯಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದರು. ಪ್ರಸ್ತುತ ವ್ಯಕ್ತಿಯನ್ನು ಕೇಂದ್ರೀಕರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯುವತಿಯನ್ನು ಕಾರಿನಲ್ಲಿ ಹತ್ತಿಸಿಕೊಂಡು ವಯನಾಡ್ ಮೂಲಕ ತಮಿಳುನಾಡಿಗೆ ತೆರಳಿದ್ದಾರೆ ಎಂಬ ಬಗ್ಗೆ ಪೊಲೀಸರಿಗೆ ಪ್ರಥಮ ಮಾಹಿತಿ ಲಭಿಸಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ತಮಿಳುನಾಡಿಗೆ ತೆರಳಿದ್ದರು. ಆದರೆ ಪೊಲೀಸರ ತಂಡ ಅಲ್ಲಿಗೆ ತಲುಪುವುದಕ್ಕಿಂತ ಮುಂಚೆ ಯುವತಿ ಹಾಗೂ ಯುವಕ ಸಂಚರಿಸಿದ್ದ ಕಾರು ತಮಿಳುನಾಡಿನಿಂದ ಆಂಧ್ರ ಪ್ರದೇಶಕ್ಕೆ ತೆರಳಿರಬೇಕೆಂದು ಶಂಕಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ತಂಡ ಹೈದರಾಬಾದ್‌ವರೆಗೆ ಕಾರನ್ನು ಬೆನ್ನಟ್ಟಿತ್ತಾದರೂ ಪತ್ತೆ ಸಾಧ್ಯವಾಗಲಿಲ್ಲ. ತನಿಖೆ ಮುಂದುವರಿಯುತ್ತಿದೆ. ಇದೇ ವೇಳೆ ಯುವತಿಯನ್ನು ಕರೆದೊಯ್ದಿರುವುದಾಗಿ ಪೊಲೀಸರು ಶಂಕಿಸುವ ಯುವಕ ನಾಪತ್ತೆಯಾದ ಬಗ್ಗೆ ವಿದ್ಯಾನಗರ ಪೊಲೀಸರು ಕೇಸು ದಾಖಲಿಸಿದ್ದಾರೆ. ಸಂಬಂಧಿಕರು ನೀಡಿದ ದೂರಿನಂತೆ ಈ ಕೇಸು ದಾಖಲಿಸಲಾಗಿದೆ.
