ಕಾಸರಗೋಡು: ಜಿಲ್ಲೆಯಲ್ಲಿ ವ್ಯಾಪಕವಾಗಿ 200 ರೂ.ಗಳ ಖೋಟಾ ನೋಟು ಚಲಾವಣೆ ಮಾಡಲಾಗುತ್ತಿದೆಯೆಂಬ ಮಾಹಿತಿ ಲಭಿಸಿದೆ. ಬೇಡಗಂ ಪೊಲೀಸ್ ಠಾಣೆ ವ್ಯಾಪ್ತಿಯ ಕುಂಟಂಗುಳಿಯಲ್ಲಿ ಖೋಟಾನೋಟು ವ್ಯಾಪಕವಾಗಿ ಈಗ ಚಲಾವಣೆಯಲ್ಲಿದ್ದು, ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಅಸಲಿ ನೋಟು ಎಂದೇ ಕಂಡುಬರುವ ಈ ಖೋಟಾ ನೋಟುಗಳಿಗೆ ಹಲವಾರು ಮಂದಿ ಈಗಾಗಲೇ ವಂಚಿತರಾಗಿದ್ದಾರೆ. ಇದೇ ವೇಳೆ 200 ರೂ.ಗಳ ಚಲಾವಣೆಯಲ್ಲಿರುವ ನೋಟು ಫ್ಯಾನ್ಸಿ ನೋಟಾಗಿದೆ ಎಂದು ಪೊಲೀಸರು ತಿಳಿಸುತ್ತಾರೆ. ನೋಟಿನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಬದಲಾಗಿ ಮನೋರಂಜನ್ ಬ್ಯಾಂಕ್ ಆಫ್ ಇಂಡಿಯಾ ಎಂದು ಇದೆ. ಹಣದ ವ್ಯವಹಾರ ವೇಳೆ ನೋಟುಗಳನ್ನು ಸರಿಯಾಗಿ ನೋಡಿ ದೃಢೀಕರಿಸಬೇಕೆಂದು ಅಧಿಕಾರಿಗಳು ಸೂಚಿಸುತ್ತಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರವಾಗುತ್ತಿದೆ. ಫ್ಯಾನ್ಸಿ ನೋಟುಗಳು ಆಟದ ವಸ್ತುಗಳಂತಾದರೆ ಅವರ ವಿರುದ್ಧ ಕ್ರಮಕ್ಕೆ ಸಾಧ್ಯತೆ ಇಲ್ಲವೆಂದು ಪೊಲೀಸರು ತಿಳಿಸುತ್ತಾರೆ.
