ಕಾಸರಗೋಡು: ವಿದ್ಯುತ್ ಸರ್ವೀಸ್ ತಂತಿ ಮೇಲೆ ಬಿದ್ದಿದ್ದ ಮಡಲನ್ನು ತೆಗೆಯುತ್ತಿದ್ದ ಯುವಕ ಬಾವಿಗೆ ಬಿದ್ದು ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.
ಉದುಮ ವಲಿಯವಳಪ್ಪಿನ ನಿವಾಸಿ ಹಾಗೂ ಉದುಮ ನಾಲಾಂವಾದುಕ್ಕಲ್ ರಸ್ತೆ ಬಳಿಯ ಹೊಟೇಲೊಂದರ ಮಾಲಕರಾದ ಅರವಿಂದನ್- ಅಂಬುಜಾಕ್ಷಿ ದಂಪತಿಯ ಏಕ ಪುತ್ರ ಅಶ್ವಿನ್ ಅರವಿಂದ್ (18) ಸಾವನ್ನಪ್ಪಿದ ದುರ್ದೈವಿ ಯುವಕ.
ಮನೆ ಪಕ್ಕದ ಬಾವಿ ಮೇಲೆ ಹಾದು ಹೋಗುತ್ತಿದ್ದ ವಿದ್ಯುತ್ ಸರ್ವೀಸ್ ತಂತಿ ಮೇಲೆ ತೆಂಗಿನ ಮರದಿಂದ ಮಡಲೊಂದು ಬಿದ್ದಿತ್ತು. ಅದನ್ನು ಕಂಡ ಅಶ್ವಿನ್ ನಿನ್ನೆ ಬಾವಿಕಟ್ಟೆ ಮೇಲೆ ಏರಿ ಮಡಲನ್ನು ತೆಗೆಯಲೆತ್ನಿಸುತ್ತಿದ್ದ ವೇಳೆ ಬಾವಿಗೆ ಬಿದ್ದಿದ್ದಾನೆ. ಚೆನ್ನಾಗಿ ಈಜಲು ಅರಿತಿರುವ ಅಶ್ವಿನ್ ಬಾವಿಗೆ ಬಿದ್ದ ರಭಸಕ್ಕೆ ತಲೆಗೂ ಗಂಭೀರ ಗಾಯ ಉಂಟಾಗಿ ಅದರಿಂದಾಗಿ ಆತ ನೀರಿನಲ್ಲಿ ಮುಳುಗಿದನು. ಅದನ್ನು ಕಂಡ ಊರವರು ಆತನನ್ನು ಬಾವಿಯಿಂದ ಮೇಲಕ್ಕೆತ್ತಲು ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ. ಕೊನೆಗೆ ನೀಡಲಾದ ಮಾಹಿತಿಯಂತೆ ಅಗ್ನಿಶಾಮಕ ದಳ ಆಗಮಿಸಿ ಅಶ್ವಿನ್ನನ್ನು ಬಾವಿಯಿಂದ ಮೇಲಕ್ಕೆತ್ತುವುದರೊಳಗಾಗಿ ಆತನ ಪ್ರಾಣಪಕ್ಷಿ ಹಾರಿ ಹೋಗಿತ್ತು.
ಕೊಚ್ಚಿಯಲ್ಲಿ ಹೋಟೆಲೊಂದರಲ್ಲಿ ದುಡಿಯುತ್ತಿದ್ದ ಅಶ್ವಿನ್ ರಜೆಯಲ್ಲಿ ಒಂದು ವಾರದ ಹಿಂದೆಯಷ್ಟೇ ಊರಿಗೆ ಬಂದಿದ್ದನು. ಸರ್ವೀಸ್ ತಂತಿಯ ಮೇಲೆ ಬಿದ್ದ ಮಡಲನ್ನು ಸರಿಸುತ್ತಿದ್ದ ವೇಳೆ ಆ ತಂತಿಯಿಂದ ವಿದ್ಯುತ್ ಶಾಕ್ ತಗಲಿ ಅಶ್ವಿನ್ ಬಾವಿಗೆ ಬಿದ್ದಿರಬಹುದೆಂದು ಊರವರು ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ ಸರ್ವೀಸ್ ತಂತಿಯಿಂದ ಶಾಕ್ ತಗಲಲು ಸಾಧ್ಯವಿಲ್ಲವೆಂದು ವಿದ್ಯುನ್ಮಂಡಳಿಯವರು ಹೇಳುತ್ತಿದ್ದಾರೆ. ಬೇಕಲ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಮೃತದೇಹವನ್ನು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೊಳಪಡಿಸಿದ ಬಳಿಕ ಊರಿಗೆ ಸಾಗಿಸಿ ಅಂತ್ಯಕ್ರಿಯೆ ನೆರವೇರಿಸಲಾಯಿತು.