ಕಾಸರಗೋಡು: ಭಾರತೀಯ ಸಂಸ್ಕೃತಿಯ ಪ್ರತಿಯೊಂದು ಆಚರಣೆಗಳ ಹಿಂದೆಯೂ ಜೀವನ ಮೌಲ್ಯಗಳು, ಬದುಕಿನ ಶ್ರೇಯಸ್ಸ್ಸಿನ ಶಕ್ತಿ ಅಡಗಿದೆ. ಬಹು ವೈಶಿಷ್ಟ್ಯದ ನಮ್ಮ ಸಂಸ್ಕೃತಿ ನಮ್ಮ ಪ್ರತಿಬಿಂಬಗಳಾಗಿದ್ದು, ಸಂಸ್ಕೃತಿಯನ್ನು ತಿರುಚಿ ವಿಕೃತಗೊಳಿಸುವುದರಿಂದ ನಮ್ಮ ಅವನತಿಗೆ ನಾವೇ ಕಾರಣರಾಗುತ್ತಿದ್ದೇವೆ ಎಂದು ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಆಶೀರ್ವಚನ ನೀಡಿದರು. ಕೋಟೆಕಣಿ ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿಯು ಪೇಟೆ ಶ್ರೀ ವೆಂಕಟ್ರಮಣ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಕಲಾಸಂಘದ ಆಶ್ರಯದಲ್ಲಿ ಕಾಸರಗೋಡು ಪೇಟೆ ವೆಂಕಟ್ರಮಣ ದೇವಾಲಯದ ವ್ಯಾಸಮಂಟಪದಲ್ಲಿ ಆಯೋಜಿಸಿದ್ದ ಕಾಸರಗೋಡು ದಸರಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪೇಟೆ ಶ್ರೀ ವೆಂಕಟ್ರಮಣ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಕಲಾ ಸಂಘದ ವ್ಯವಸ್ಥಾಪಕ ಕೆ.ಎನ್.ವೆಂಕಟ್ರಮಣ ಹೊಳ್ಳ ಅಧ್ಯಕ್ಷತೆ ವಹಿಸಿ ಮಾತನಾಡಿ ವಿಭಿನ್ನತೆಗಳೊಂದಿಗೆ ವಿಶಾಲ ಚಿಂತನೆಗಳನ್ನು ಯುವ ಸಮೂಹಕ್ಕೆ ಕೈದಾಟಿಸುವುದು ಪ್ರಜ್ಞಾವಂತ ನಾಗರಿಕ ಪ್ರಪಂಚದ ಕರ್ತವ್ಯ. ಈ ನಿಟ್ಟಿನಲ್ಲಿ ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿ ವರ್ಷಂಪ್ರತಿ ಆಯೋಜಿಸುವ ದಸರಾ ನಾಡಹಬ್ಬ ಗಮನಾರ್ಹವಾದುದು. ಈ ಸಂದರ್ಭ ಹಿರಿಯ ಲೇಖಕ ವೈ.ಸತ್ಯನಾರಾಣ, ನೇಪಥ್ಯ ಕಲಾವಿದ ಸುಧಾಕರ ಮಲ್ಲರನ್ನು ಕಾಸರಗೋಡು ದಸರಾ ಗೌರವಾರ್ಪಣೆಗೈದು ಅಭಿನಂದಿಸಲಾಯಿತು.
ಶಿವರಾಮ ಕಾಸರಗೋಡು, ಶ್ರೀಲತಾ ಶುಭ ಹಾರೈಸಿದರು. ಗುರುಪ್ರಸಾದ್ ಕೋಟೆಕಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರೂಪಕಲಾ ಹೊಳ್ಳ ಸ್ವಾಗತಿಸಿ, ಕಿಶೋರ್ ಕೆ ಎಸ್‌ವಿಟಿ ವಂದಿಸಿದರು. ಪುರುಷೋತ್ತಮ ಭಟ್ ಕೆ ನಿರೂಪಿಸಿದರು.
ಬಳಿಕ ಸೌಮ್ಯಾ ಶ್ರೀಕಾಂತ್ ಮಧೂರು ಅವರ ಶಿಷ್ಯೆಯರಿಂದ ಹೆಜ್ಜೆ-ಗೆಜ್ಜೆ ನೃತ್ಯ ವೈವಿಧ್ಯ ಪ್ರಸ್ತುತಿಗೊಂಡಿತು. ದಿವಾಕರ ಕೆ ಅಶೋಕನಗರ ಅವರಿಂದ ಗಾಯನ ಕಾರ್ಯಕ್ರಮ ನಡೆಯಿತು. ಕಾವ್ಯ ಕುಶಲ ನಿರ್ವಹಿಸಿದರು. ಶ್ರೀಕಾಂತ್ ಕಾಸರಗೋಡು ಸಹಕರಿಸಿದರು.