ಮಂಜೇಶ್ವರ ಚುನಾವಣಾ ತಕರಾರು ಪ್ರಕರಣ: ಜಿಲ್ಲಾ ಸೆಶನ್ಸ್ ನ್ಯಾಯಾಲಯ ನೀಡಿದ ತೀರ್ಪಿನ ವಿರುದ್ಧ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ ರಾಜ್ಯ ಸರಕಾರ

ಮಂಜೇಶ್ವರ: ಮಂಜೇಶ್ವರ ವಿಧಾನಸಭಾ ಕ್ಷೇತ್ರಕ್ಕೆ 2021ರಲ್ಲಿ ನಡೆದ ಚುನಾವಣೆಯಲ್ಲಿ ಬಿಎಸ್‌ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೆ. ಸುಂದರರಿಗೆ ಹಣ ಹಾಗೂ ಮೊಬೈಲ್ ಫೋನ್ ನೀಡಿ ಅವರ ನಾಮಪತ್ರ ವನ್ನು ಹಿಂತೆಗೆದುಕೊಳ್ಳುವಂತೆ ಮಾಡಲಾಗಿದೆಯೆಂದು ಆರೋಪಿಸಿ ನೀಡಲಾದ ದೂರಿನಂತೆ ಪೊಲೀಸರು ದಾಖಲಿಸಿಕೊಂಡಿದ್ದ ಕೇಸನ್ನು ರದ್ದುಪಡಿಸಿ ಕಾಸರಗೋಡು ಜಿಲ್ಲಾ ಸೆಶನ್ಸ್ ನ್ಯಾಯಾಲಯ  ನೀಡಿದ್ದ ತೀರ್ಪಿನ ವಿರುದ್ಧ ಕೇರಳ ಸರಕಾರ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ.

ಅಂದು ಬಿಎಸ್‌ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೆ. ಸುಂದರರಿಗೆ ಎರಡು ಲಕ್ಷ ರೂ. ಹಾಗೂ 8,300 ರೂ. ಮೌಲ್ಯದ ಮೊಬೈಲ್ ನೀಡಿದರೂ ಬೆದರಿಕೆಯೊಡ್ಡಿ ಅವರ ನಾಮಪತ್ರವನ್ನು ಹಿಂತೆಗೆದುಕೊಳ್ಳುವಂತೆ ಮಾಡಲಾಗಿತ್ತೆಂದು ಆರೋಪಿಸಿ ಅಂದು ಇದೇ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಸಿಪಿಎಂ ಉಮೇದ್ವಾರರು ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ನಂತರ ಈ ಪ್ರಕರಣದ ತನಿಖೆಯನ್ನು ಕ್ರೈಂ ಬ್ರಾಂಚ್ ವಿಭಾಗಕ್ಕೆ ಹಸ್ತಾಂತರಿಸಲಾಗಿತ್ತು. ಹೀಗೆ ಪೊಲೀಸರು ದಾಖಲಿಸಿಕೊಂಡಿದ್ದ ಪ್ರಕರಣದಲ್ಲಿ ಅಂದು ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ, ಸುರೇಂದ್ರನ್ ಸೇರಿದಂತೆ ಬಿಜೆಪಿಯ ಆರು ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ಈ ಪ್ರಕರಣ ಕಾನೂನುಪರ ನೆಲೆಗೊಳ್ಳದೆಂದೂ ಮಾತ್ರವಲ್ಲ ನಮ್ಮ ವಿರುದ್ಧ ಉದ್ದೇಶಪೂರ್ವಕವಾಗಿ ಈ ಕೇಸು ದಾಖಲಿಸಲಾಗಿದೆ. ಆದ್ದರಿಂದ ಅದನ್ನು ರದ್ದುಪಡಿಸಬೇಕೆಂದು ಕೋರಿ ಕೆ. ಸುರೇಂದ್ರನ್ ಸೇರಿದಂತೆ ಆರು ಮಂದಿ ಕಾಸರಗೋಡು ಜಿಲ್ಲಾ ಸೆಶನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆ ಬಗ್ಗೆ ವಿಚಾರಣೆ ನಡೆಸಿದ ಜಿಲ್ಲಾ ಸೆಶನ್ಸ್  ನ್ಯಾಯಾಲಯ 2024 ಅಕ್ಟೋಬರ್ 5ರಂದು ಪ್ರಕರಣವನ್ನು ರದ್ದುಪಡಿಸಿ ತೀರ್ಪು ನೀಡಿತ್ತು. ಆ ತೀರ್ಪನ್ನು ಮರುಪರಿಶೀಲಿಸಬೇಕೆಂದು ಆಗ್ರಹಿಸಿ ರಾಜ್ಯ ಸರಕಾರ ಬಳಿಕ ಹೈಕೋರ್ಟ್‌ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಿತ್ತು. ಅದನ್ನು ಸರಕಾರ ಹಿಂಪಡೆದು ಆ ತೀರ್ಪಿನ ವಿರುದ್ಧ ಈಗ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ.

You cannot copy contents of this page