ಕಾಸರಗೋಡು: ಕಾರಿನಲ್ಲಿ ೧೧೨ ಕಿಲೋ ಗಾಂಜಾ ಸಾಗಿಸಿದ ಪ್ರಕರಣದ ಆರೋಪಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ದ್ವಿತೀಯ)ದ ನ್ಯಾಯಾಧೀಶೆ ಕೆ. ಪ್ರಿಯಾ ಅವರು ೧೦ ವರ್ಷ ಕಠಿಣ ಸಜೆ ಮತ್ತು ಒಂದು ಲಕ್ಷ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ.
ವೆಳ್ಳರಿಕುಂಡ್ ತಾಲೂಕಿನ ಭೀಮನಡಿ ಕುನ್ನುಂಗೈ ಕಕ್ಕಾಡಿನಗತ್ತ್ ನೌಫಲ್ ಕೆ.ಕೆ. (40) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಮೂರು ತಿಂಗಳ ಹೆಚ್ಚುವರಿ ಸಜೆ ಅನುಭವಿಸ ಬೇಕಾಗಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ. ಇದೇ ಪ್ರಕರಣದ ಎರಡನೇ ಆರೋಪಿ ಭೀಮನಡಿ ಕುರಂಚೇರಿ ಮುರಿಂಙತ್ ಪರಂಬಿಲ್ ರೋನಿ ವರ್ಗೀಸ್ (32) ಮತ್ತು ಈ ಇಬ್ಬರು ಆರೋಪಿಗಳಿಗೆ ಆರ್ಥಿಕ ನೆರವು ಒದಗಿಸಿದ್ದ ಮೂರನೇ ಆರೋಪಿ ಕುನ್ನುಂಗೈ ಅಡೆಕ್ಕಳ ಕಂಡದ ಸಮೀರ್ ಒಟತೈ ಅಲಿಯಾಸ್ ಮುಳಗುಪುಡಿ ಸಮೀರ್ (37) ಎಂಬಾತನನ್ನು ನ್ಯಾ ಯಾಲಯ ಖುಲಾಸೆಗೊಳಿಸಿ ತೀರ್ಪು ನೀಡಿದೆ. 2019 ಫೆಬ್ರವರಿ ೩ರಂದು ಚಿತ್ತಾರಿಕ್ಕಲ್ ಪೂಂಙಾಟ್ ಎಂಬಲ್ಲಿ ಅಂದು ಚಿತ್ತಾರಿಕ್ಕಲ್ ಪೊಲೀಸ್ ಠಾಣೆಯ ಎಸ್‌ಐ ಆಗಿದ್ದ ರಂಜಿತ್ ರವೀಂದ್ರನ್‌ರ ನೇತೃತ್ವದ ಪೊಲೀಸರ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ ೧೧೨ ಕಿಲೋ ಗ್ರಾಂ ಗಾಂಜಾ ಪತ್ತೆಹಚ್ಚಿ ವಶಪಡಿಸಲಾಗಿತ್ತು. ಅಂದು ಕಾಸರಗೋಡು ನರ್ಕೋಟಿಕ್ಸ್ ಸೆಲ್ ಡಿವೈಎಸ್‌ಪಿಯಾಗಿದ್ದ ಎನ್ ನಂದನ್ ಪಿಳ್ಳೆ ಈ ಪ್ರಕರಣದ ಬಗ್ಗೆ ಮೊದಲು ಹಾಗೂ ನಂತರ ಅಂದು ಹೊಸದುರ್ಗ ಡಿವೈಎಸ್‌ಪಿ ಆಗಿದ್ದ ಟಿ.ಎನ್. ಸಜೀವನ್ ಈ ಪ್ರಕರಣದ ಮುಂದಿನ ತನಿಖೆ ನಡೆಸಿದ್ದರು. ನಂತರ ಹೊಸದುರ್ಗ ಡಿವೈಎಸ್‌ಪಿ (ಈಗ ನಿವೃತ್ತ) ಪಿ.ಕೆ. ಸುಧಾಕರನ್ ಈ ಪ್ರಕರಣದ ದೋಷಾ ರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಒಂದನೇ ಆರೋಪಿಗೆ ಈ ಶಿಕ್ಷೆ ವಿಧಿಸಲಾಗಿದೆ. ಪ್ರೋಸಿಕ್ಯೂಷನ್ ಪರ ಹೆಚ್ಚುವರಿ ಸರಕಾರಿ ಪ್ಲೀಡರ್ ಜಿ. ಚಂದ್ರಮೋಹನ್ ಮತ್ತು ನ್ಯಾಯವಾದಿ ಚಿತ್ರಕಲ ನ್ಯಾಯಾಲಯದಲ್ಲಿ ವಾದಿಸಿದ್ದರು.