ಕಾಸರಗೋಡು: ಪ್ರಾಯ ಪೂರ್ತಿಯಾಗದ ವಿದ್ಯಾರ್ಥಿನಿ ಯರಿಗೆ ಕಿರುಕುಳ ನೀಡಿದ ಪ್ರಕರಣದ ಆರೋಪಿಗೆ ಕಾಸರಗೋಡು ಫಾಸ್ಟ್ ಟ್ರಾಕ್ ಸ್ಪೆಷಲ್ ನ್ಯಾಯಾಲಯ (ಪೋಕ್ಸೋ) ದ ನ್ಯಾಯಾಧೀಶರಾದ ರಾಮು ರಮೇಶ್ ಚಂದ್ರಭಾನು ಅವರು 47 ವರ್ಷ ಕಠಿಣ ಸಜೆ ಹಾಗೂ ಎರಡೂವರೆ ಲಕ್ಷ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ.
ಈಗ ಬೋವಿಕ್ಕಾನ ಮುದ ಲಪ್ಪಾರ ಕ್ವಾರ್ಟರ್ಸ್ವೊಂದರಲ್ಲಿ ವಾಸಿಸುತ್ತಿರುವ ಚೆಂಗಳ ಕೆ.ಕೆ.ಕುನ್ನಿಲ್ ತೈವಳಪ್ಪು ನಿವಾಸಿ ಅಬ್ದುಲ್ ನೌಶಾದ್ (40) ಎಂಬಾತನಿಗೆ ಈ ಶಿಕ್ಷೆ ವಿಧಿಸ ಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ 10 ತಿಂಗಳ ಹೆಚ್ಚುವರಿ ಸಜೆ ಅನುಭವಿ ಸಬೇಕಾಗಿದೆಯೆಂದು ತೀರ್ಪಿನಲ್ಲಿ ತಿಳಿಸಲಾಗಿದೆ.
ಶಾಲಾ ಬಸ್ಸೊಂದರ ಚಾಲಕನಾಗಿ ಈ ಹಿಂದೆ ದುಡಿಯುತ್ತಿದ್ದ ಆರೋಪಿ 2019ಅಕ್ಟೋಬರ್ ತಿಂಗಳಲ್ಲಿ ಆ ಶಾಲೆಯ ವಿದ್ಯಾರ್ಥಿ ನಿಯರನ್ನು ಪುಸಲಾಯಿಸಿ ಮುದಲಪ್ಪಾರದಲ್ಲಿ ಆತ ವಾಸಿಸುತ್ತಿದ್ದ ಕ್ವಾರ್ಟರ್ಸ್ಗೆ ಕರೆದೊಯ್ದು ಅಲ್ಲಿ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿ ನೀಡಲಾದ ದೂರಿನಂತೆ ಆದೂರು ಪೊಲೀಸರು ಆತನ ವಿರುದ್ಧ ಪೋಕ್ಸೋ ಕಾನೂನು ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದರು. ಪತ್ನಿ ಮತ್ತು ಮಕ್ಕಳು ತವರು ಮನೆಗೆ ಹೋದ ವೇಳ ಆರೋಪಿ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುತ್ತಿದ್ದನೆಂದು ದೂರಿನಲ್ಲಿ ಆರೋಪಿಸಲಾಗಿತ್ತು. ಶಾಲೆಯಲ್ಲಿ ನಡೆದ ಕೌನ್ಸಿಲಿಂಗ್ ವೇಳೆ ಆ ವಿದ್ಯಾರ್ಥಿನಿಯರು ನಡೆದ ವಿಷಯ ಬಹಿರಂಗಪಡಿಸಿದ್ದರು. ಅದರಂತೆ ಚೈಲ್ಡ್ ಲೈನ್ ಕಾರ್ಯಕರ್ತರು ಆ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದರು. ಅಂದು ಆದೂರು ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಆಗಿದ್ದ ಕೆ. ಪ್ರೇಮ್ ಸದನ್ ನೇತೃತ್ವದ ಪೊಲೀಸರ ತಂಡ ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಆ ಪ್ರಕರಣದಲ್ಲಿ ಆರೋಪಿಗೆ ಈ ಶಿಕ್ಷೆ ನೀಡಲಾಗಿದೆ. ಪ್ರೋಸಿಕ್ಯೂಶನ್ ಪರ ಸ್ಪೆಷಲ್ ಪಬ್ಲಿಕ್ ಪ್ರೋಸಿಕ್ಯೂಟರ್ (ಪೋಕ್ಸೋ) ಎ.ಕೆ. ಪ್ರಿಯಾ ನ್ಯಾಯಾಲಯದಲ್ಲಿ ವಾದಿಸಿದ್ದರು.