ಬಹುಮಾನ ಬಂದ ಲಾಟರಿ ಟಿಕೆಟ್‌ನ ಜೆರೋಕ್ಸ್ ಪ್ರತಿ ತೆಗೆದು ಮಾರಾಟಗಾರನಿಗೆ ನೀಡಿ ವಂಚನೆ

ಕಾಸರಗೋಡು: ಕೇರಳ ರಾಜ್ಯ ಲಾಟರಿಯ ಕಲರ್ ಜೆರೋಕ್ಸ್ ಪ್ರತಿ ತೆಗೆದು ಮಾರಾಟಗಾರರನ್ನು ವಂಚಿಸುವ ತಂಡ ರಾಜ್ಯದಲ್ಲಿ ಸಕ್ರಿಯಗೊಂಡಿರುವುದಾಗಿ ತಿಳಿದು ಬಂದಿದೆ. ತೃಶೂರಿನಲ್ಲಿ ವ್ಯಕ್ತಿಯೋ ರ್ವ ಲಾಟರಿ ಮಾರಾಟಗಾರನಿಗೆ ಲಾಟರಿ ಟಿಕೆಟ್‌ನ ಜೆರೋಕ್ಸ್ ಪ್ರತಿ ನೀಡಿ ವಂಚಿಸಿರುವುದು ಬೆಳಕಿಗೆ ಬಂದಿದೆ. ಕಾಟೂರು ಪೆರಿಞನಂ ನಿವಾಸಿ ನೆಲ್ಲಿಪರಂಬಿಲ್‌ನ ತೇಜಸ್ ಎಂಬವರನ್ನು ವ್ಯಕ್ತಿಯೋರ್ವ ವಂಚಿಸಿದ್ದಾನೆ. ಸೆ. ೨೭ರಂದು ಘಟನೆ ನಡೆದಿದೆ. ಬೈಕ್‌ನಲ್ಲಿ ತಲುಪಿದ ಯುವಕ ತೇಜಸ್‌ರಿಗೆ 21ರಂದು ಡ್ರಾ ನಡೆದ ಲಾಟರಿಯ ಆರು ಟಿಕೆಟ್‌ಗಳನ್ನು ನೀಡಿ ಬಹುಮಾನ ಇದೆಯೇ ಎಂದು ಪರಿಶೀಲಿಸುವಂತೆ ತಿಳಿಸಿದ್ದನು. ತೇಜಸ್ ಅದನ್ನು ಸ್ಕ್ಯಾನ್ ಮಾಡಿ ನೋಡಿದಾಗ ತಲಾ ೫೦೦೦ ರೂ.ಗಳಂತೆ ಬಹುಮಾನ ಬಂದಿರುವುದಾಗಿ ತಿಳಿದು ಬಂತು. ಈ ವೇಳೆ ತೇಜಸ್‌ರ ಕೈಯಲ್ಲಿ ಹೆಚ್ಚಿನ ಮೊತ್ತ ಇಲ್ಲದುದರಿಂದ ಮೂರು ಟಿಕೆಟ್‌ನ ಹಣ ನೀಡಿದ್ದಾರೆ. ಏಜೆಂಟ್ ಕಮಿಷನ್ ಕಳೆದು 14,700 ರೂಪಾಯಿ ಅವರು ನೀಡಿದ್ದರು. ಬಳಿಕ ಆ ಟಿಕೆಟ್‌ಗಳನ್ನು ತೃಶೂರಿನ ಏಜೆನ್ಸಿಗೆ ತಲುಪಿಸಿ ದಾಗಲೇ ತಾನು ವಂಚನೆಗೀಡಾದ ವಿಷಯ ಅರಿವಿಗೆ ಬಂದಿದೆ. ಅದೇ ನಂಬ್ರದ ಯಥಾರ್ಥ ಟಿಕೆಟನ್ನು ಆಲಪ್ಪುಳ ಟ್ರಷರಿಯಲ್ಲಿ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಬಳಿಕ ನಡೆಸಿದ ಪರಿಶೀಲನೆಯಲ್ಲಿ ತೇಜಸ್‌ರ ಕೈಯಲ್ಲಿರುವುದು ಕಲರ್ ಜೆರೋಕ್ಸ್ ಪ್ರತಿಗಳಾಗಿವೆ ಎಂದು ತಿಳಿದು ಬಂದಿದೆ. ಈ ಬಗ್ಗೆ ತೇಜಸ್ ನೀಡಿದ ದೂರಿನಂತೆ ಕಾಟೂರು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಬಹುಮಾನ ಬಂದ ಯಥಾರ್ಥ ಟಿಕೆಟ್ ನೀಡಿದವರು ಯಾರೆಂದು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಆ ವ್ಯಕ್ತಿ ತಿಳಿಯದೆ ಬಹುಮಾನ ಬಂದ ಲಾಟರಿ ಟಿಕೆಟ್‌ನ  ಪ್ರತಿ ತೆಗೆಯಲು ಸಾಧ್ಯವಿಲ್ಲವೆಂದು ಪೊಲೀಸರು ಹೇಳುತ್ತಿದ್ದಾರೆ.

You cannot copy contents of this page