ಉಪ್ಪಳ: ಆರೋಗ್ಯ ಖಾತೆ ಸಚಿವ ಇಂದು ಜಿಲ್ಲೆಯಲ್ಲಿ ವಿವಿಧ ಕುಟುಂಬಾರೋಗ್ಯ ಕೇಂದ್ರವನ್ನು ಉದ್ಘಾಟಿಸಲಿದ್ದು, ಆದರೆ ೯೫ ಶೇ. ಕಾಮಗಾರಿ ಪೂರ್ತಿಗೊಂಡ ಬೇಕೂರು ಕುಟುಂಬಾರೋಗ್ಯ ಕೇಂದ್ರಕ್ಕೆ ಇನ್ನೂ ಮುಹೂರ್ತ ಕೂಡಿಬಂದಿಲ್ಲ. ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಈ ಕುಟುಂಬಾರೋಗ್ಯ ಕೇಂದ್ರಕ್ಕಾಗಿ ಸ್ಥಳೀಯರು ಒಕ್ಕೊರಲಿನ ಹೋರಾಟ ನಡೆಸಿದಾಗ ಕಟ್ಟಡ ನಿರ್ಮಾಣ ಆರಂಭಿಸಲಾಗಿದ್ದು, ಈಗ ಹೆಚ್ಚಿನ ಕಾಮಗಾರಿ ಮುಗಿದು ವರ್ಷ ಹಲವು ಕಳೆದಿದೆ. ಆದರೆ ಕಟ್ಟಡದ ಸುತ್ತು ಆವರಣಗೋಡೆ, ವಿದ್ಯುತ್ ಸಂಪರ್ಕ ಲಭ್ಯವಾಗದಿರುವುದು ಉದ್ಘಾಟನೆ ವಿಳಂಬಕ್ಕೆ ಕಾರಣವೆನ್ನಲಾಗಿದೆ. ಸ್ಥಳೀಯ ಬಡವರಾದ ಹಲವಾರು ರೋಗಿಗಳಿಗೆ ಉಪಕಾರಪ್ರದವಾಗಿರ ಬೇಕಾಗಿದ್ದ ಈ ಆಸ್ಪತ್ರೆಯ ಉದ್ಘಾಟನೆ ಕೇವಲ ತಾಂತ್ರಿಕ ನೆಪದಿಂದ ವಿಳಂಬಗೊಳ್ಳುತ್ತಿ ರುವುದು ಸ್ಥಳೀಯರಿಗೆ ಮಾಡುವ ಗದ್ರೋಹವೆಂದು ಅಭಿಪ್ರಾಯ ಪಡಲಾಗಿದೆ. ಪ್ರಸ್ತುತ ಈ ಪರಿಸರದ ಹಲವಾರು ರೋಗಗಳು ಮಂಗಲ್ಪಾಡಿ ತಾಲೂಕು ಆಸ್ಪತ್ರೆಯನ್ನು ಅವಲಂಬಿಸಬೇಕಾಗಿ ಬರುತ್ತಿದ್ದು, ಹಣ ಹಾಗೂ ಸಮಯ ವ್ಯರ್ಥವಾಗುತ್ತಿದೆ ಎಂದಿದ್ದಾರೆ. ಈ ಬಗ್ಗೆ ತಕ್ಷಣ ಗಮನ ಹರಿಸಬೇಕೆಂದು ಆರೋಗ್ಯ ಸಚಿವೆ ಜಿಲ್ಲೆಯಲ್ಲಿರುವಾಗಲೇ ಎನ್‌ಸಿಪಿ ಮಂಜೇಶ್ವರ ಬ್ಲೋಕ್ ಅಧ್ಯಕ್ಷ ಮೊಹಮ್ಮದ್ ಕೈಕಂಬ ಮನವಿ ನೀಡಿ ಆಗ್ರಹಿಸಿದ್ದಾರೆ.
