ಕಾಸರಗೋಡು: ಖಾಸಗಿ ಸಂಸ್ಥೆ ಗಳನ್ನು ರಾಜ್ಯ ಸರಕಾರದ ಆಡಳಿತ ಸಾಧನೆಯಾಗಿ ತೋರಿಸಲು ಪಿಣರಾಯಿ ವಿಜಯನ್ ಸರಕಾರ ಯತ್ನಿಸುತ್ತಿರುವುದು ಅಪಹಾಸ್ಯಕರವಾ ಗಿದೆಯೆಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ತಿಳಿಸಿದ್ದಾರೆ. ಖಾಸಗಿ ಸಂಸ್ಥೆಗಳ ಮುಂದೆ ಕೆಂಪು ಧ್ವಜ ಸ್ಥಾಪಿಸಿ ರಾಜ್ಯದಲ್ಲಿ ಅಭಿವೃದ್ಧಿಗೆ ಅಡ್ಡಿ ಪಡಿಸುತ್ತಿರುವುದು ಸಿಪಿಎಂ ಹಾಗೂ ಎಡಪಕ್ಷಗಳಾಗಿವೆ ಎಂಬುವುದನ್ನು ಕೇರಳದ ಜನತೆ ಮರೆಯಲಾರರು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯ ಖಾಸಗಿ ಆಸ್ಪತ್ರೆಯೊಂದರ ಉದ್ಘಾಟನೆಗೆ ಸಮಯ ಕಂಡುಕೊಂಡ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಲ್ಪವೇ ದೂರದಲ್ಲಿರುವ ಉಕ್ಕಿನಡ್ಕದ ಸರಕಾರಿ ಮೆಡಿಕಲ್ ಕಾಲೇಜಿನತ್ತ ದೃಷ್ಟಿ ಹಾಯಿಸಲು ಕೂಡಾ ಸಿದ್ಧರಾಗಲಿಲ್ಲ. ಕೇಂದ್ರ ಸರಕಾರ ಕೇರಳಕ್ಕೆ ಮಂಜೂರು ಮಾಡಿದ ಏಮ್ಸ್ ಆಸ್ಪತ್ರೆಯನ್ನು ಕಾಸರಗೋಡು ಜಿಲ್ಲೆಯಲ್ಲಿ ಸ್ಥಾಪಿಸಲು ಆಸಕ್ತಿ ತೋರಿಸದ ಎಲ್.ಡಿ.ಎಫ್ ಹಾಗೂ ಯುಡಿಎಫ್ನ ನೇತಾರರು ಖಾಸಗಿ ಆಸ್ಪತ್ರೆಯ ಉದ್ಘಾಟನೆಯಲ್ಲಿ ಒಂದಾಗಿ ಭಾಗವಹಿಸಿರುವುದನ್ನು ಜನರು ಕಂಡಿದ್ದಾರೆ. ಕೇರಳದ ಅಭಿವೃದ್ಧಿಗೆ ಕೇಂದ್ರ ಅಡ್ಡಿ ಪಡಿಸುತ್ತಿದೆಯೆಂದು ಆರೋಪಿಸುವ ಪಿಣರಾಯಿ ಸರಕಾರ ಹತ್ತು ವರ್ಷ ಕಳೆದರೂ ಕಾಸರಗೋಡು ಮೆಡಿಕಲ್ ಕಾಲೇಜು ಕಟ್ಟಡ ನಿರ್ಮಾಣ ಪೂರ್ತಿಗೊಳಿಸದಿರಲು ಕಾರಣವೇನು ಎಂದು ತಿಳಿಸಬೇಕೆಂದೂ ಎಂ.ಎಲ್. ಅಶ್ವಿನಿ ಒತ್ತಾಯಿಸಿದ್ದಾರೆ.