ಮಸ್ಕತ್-ಮಂಗಳೂರು ನೇರ ವಿಮಾನ ಸೇವೆ ಸ್ಥಗಿತ ಕರಾವಳಿ ಪ್ರದೇಶದ ಅನಿವಾಸಿ ಭಾರತೀಯರು ಸಂಕಷ್ಟದಲ್ಲಿ

ಮಂಗಳೂರು: ಮಂಗಳೂರು-ಮಸ್ಕತ್ ನೇರ ವಿಮಾನಯಾನ ಸೇವೆ ಯನ್ನು ಕಳೆದ ಮೂರು ತಿಂಗಳಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದರಿಂದ ಅನಿವಾಸಿ ಭಾರತೀಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ವಾರಕ್ಕೆ ನಾಲ್ಕು ವಿಮಾನಗಳು ಈ ಮೊದಲು ನಿಯಮಿತವಾಗಿ ಸಂಚಾರ ಮಾಡುತ್ತಿದ್ದವು. ದಶಕಗಳಿಂದ ನಿರಂತರವಾಗಿ ನಡೆದಿದ್ದ ಈ ಸೇವೆ ಅಚಾನಕ್ ಸ್ಥಗಿತಗೊಂಡಿದ್ದು, ಮಸ್ಕತ್‌ನಲ್ಲಿ ನೆಲೆಸಿರುವ ಕರಾವಳಿ ಪ್ರದೇಶದ ಪ್ರಯಾಣಿಕರಿಗೆ ಸಂಕಷ್ಟ ಉಂಟುಮಾಡಿದೆ. ಗಲ್ಫ್ನ ಬಹುತೇಕ ರಾಷ್ಟ್ರಗಳಿಗೆ ನೇರ ವಿಮಾನ ಸೇವೆ ಮುಂದುವರಿದಿರುವ ಸಂದರ್ಭದಲ್ಲಿ, ಇತ್ತೀಚೆಗೆ ಕುವೈತ್ ದೇಶಕ್ಕೂ ನೇರ ವಿಮಾನ ಸೇವೆ ಆರಂಭಗೊAಡಿದೆ. ಆದರೆ ಮಸ್ಕತ್‌ನಿಂದ ಮಂಗಳೂರಿಗೆ ಪ್ರಯಾಣಿಸುವವರು ಈಗ ದೆಹಲಿ, ಮುಂಬೈ ಅಥವಾ ಕೇರಳದ ಕಣ್ಣೂರು ಮೂಲಕ ಪ್ರಯಾಣಿಸಬೇಕಾದ ಪರಿಸ್ಥಿತಿ ಎದುರಾಗಿದೆ. ದಿನವಿಡೀ ಪ್ರಯಾಣದ ಬಳಿಕ ಮಾತ್ರ ಮಂಗಳೂರು ತಲುಪಬೇಕಾಗಿರುವುದರಿಂದ ಅನೇಕರು ಸಂಕಷ್ಟಕ್ಕೀಡಾಗಿದ್ದಾರೆ. ವಾರಕ್ಕೆ ನಾಲ್ಕು ವಿಮಾನಗಳ ಬದಲು ಕನಿಷ್ಠ ಎರಡು ವಿಮಾನ ಸೇವೆ ಮರುಪ್ರಾರಂಭಿಸಬೇಕೆಂಬುದು ಓಮಾನ್‌ನಲ್ಲಿ ನೆಲೆಸಿರುವ ಕುಮುಟ, ಕುಂದಾಪುರ, ಉಡುಪಿ, ಚಿಕ್ಕಮಗಳೂರು, ಮಂಗಳೂರು ಹಾಗೂ ಕಾಸರಗೋಡು ಪ್ರದೇಶದ ಅನಿವಾಸಿಗಳ ಒತ್ತಾಯವಾಗಿದೆ.
ಈ ಬಗ್ಗೆ ತುರ್ತು ಸ್ಪಂದಿಸಬೇಕೆಂದು ಆಗ್ರಹಿಸಿ ಮಸ್ಕತ್ ಮತ್ತು ಕರಾವಳಿ ಪ್ರದೇಶದ ಅನಿವಾಸಿ ಭಾರತೀಯರು ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಹಾಗೂ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಈ ಕುರಿತು ಓಮಾನ್‌ನ ಹಿರಿಯ ಸಮುದಾಯ ನಾಯಕ ಮಲ್ಲಾರ್ ಶಶಿಧರ ಶೆಟ್ಟಿ ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟರಿಗೆ ವಿಷಯ ತಿಳಿಸಿ, ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಸಮುದಾಯ ಸಂಘಟನೆಗಳ ಒಗ್ಗಟ್ಟಾಗಿ ಶಶಿಧರ ಶೆಟ್ಟಿ ನೇತೃತ್ವದಲ್ಲಿ ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ, ಗಡಿನಾಡ ಸಾಹಿತ್ಯ ಅಕಾಡೆಮಿ-ಓಮಾನ್, ಕೆಎಂಸಿಸಿ ಮಂಜೇಶ್ವರ ಮಂಡಲ ಅಧ್ಯಕ್ಷ ಅಬೂಬಕರ್ ರಾಯಲ್ ಬೂಲ್ಲಾರ್, ಕರ್ನಾಟಕ ಜಾನಪದ ಪರಿಷತ್ತು – ಓಮಾನ್ ಘಟಕ ಅಧ್ಯಕ್ಷ ಶಿವಾನಂದ ಕೋಟ್ಯಾನ್, ಮೊಗವೀರ ಮಸ್ಕತ್ ಅಧ್ಯಕ್ಷ ಪದ್ಮಾಕರ ಮೆಂಡನ್, ಯುವರಾಜ್ ಮಸ್ಕತ್, ವಿಠಲ ಪೂಜಾರಿ, ಮಸ್ಕತ್ ಕ್ರಿಕೆಟ್ ಆಟಗಾರ ಸತೀಶ್ ಬಾರ್ಕೂರು ಮುಂತಾದವರು ಮನವಿ ಸಲ್ಲಿಸಿ ಸರಕಾರ ಮತ್ತು ವಿಮಾನಯಾನ ಇಲಾಖೆಯು ಈ ವಿಷಯಕ್ಕೆ ತಕ್ಷಣ ಸ್ಪಂದಿಸಿ, ಮಸ್ಕತ್ ಮಂಗಳೂರು ನೇರ ವಿಮಾನ ಸೇವೆ ಮರುಪ್ರಾರಂಭಗೊಳಿಸುವAತೆ ಅವರು ಒತ್ತಾಯಿಸಿದ್ದಾರೆ.

RELATED NEWS

You cannot copy contents of this page