ಬದಿಯಡ್ಕ: ಶಬರಿಮಲೆ ದೇಗುಲದ ಚಿನ್ನದ ಕವಚವನ್ನು ನಿಗೂಢವಾದ ರೀತಿಯಲ್ಲಿ ಸಾಗಿಸಿದ ಘಟನೆ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಸುರೇಂದ್ರನ್ ಆಗ್ರಹಪಟ್ಟಿದ್ದಾರೆ. ಜನಪ್ರತಿನಿಧಿಯಾಗಿ ೨೫ ವರ್ಷ ಪೂರ್ತೀಕರಿಸಿದ ಡಿ. ಶಂಕರರಿಗೆ ಬದಿಯಡ್ಕ ಪಂಚಾಯತ್ ಸಮಿತಿಯ ನೇತೃತ್ವದಲ್ಲಿ ನಡೆಸಲಾದ ಅಭಿನಂದನಾ ಕಾರ್ಯಕ್ರಮ ಮತ್ತು ಬಿಜೆಪಿ ಕಾರ್ಯಕರ್ತ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಶಬರಿಮಲೆ ದೇಗುಲದ ಚಿನ್ನದ ಕವಚವನ್ನು ನಿಗೂಢವಾದ ರೀತಿಯಲ್ಲಿ ಸಾಗಿಸಿದ ಘಟನೆ ಬಗ್ಗೆ ವಿಪಕ್ಷ ತಾಳುತ್ತಿರುವ ಮೌನ ಭಾರೀ ಶಂಕೆಗೆ ದಾರಿ ಮಾಡಿಕೊಡುತ್ತಿದೆ. ಆದ್ದರಿಂದ ಆ ಬಗ್ಗೆ ನಿಷಕ್ಷ ಹಾಗೂ ನ್ಯಾಯುತವಾದ ರೀತಿಯ ತನಿಖೆ ಖಾತರಿಪಡಿಸಲು ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿಕೊಡಬೇಕಾಗಿದೆ. ಅತೀ ಭದ್ರತಾ ವಲಯವಾದ ಶಬರಿಮಲೆಯ ಚಿನ್ನದ ಕವಚವನ್ನು ಸಾಗಿಸಿದ ಬಗ್ಗೆ ಭಕ್ತರು ಮತ್ತು ಬಿಜೆಪಿ ಮಾತ್ರವೇ ಆತಂಕ ವ್ಯಕ್ತಪಡಿಸಿ ದೂರು ಸಲ್ಲಿಸಿವೆ. ಶಬರಿಮಲೆ ಅಯ್ಯಪ್ಪ ಸಂಗಮ ಕಾರ್ಯಕ್ರಮ ನಡೆಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಯ್ಯಪ್ಪ ಭಕ್ತರಾಗಿ ಮಾರ್ಪಾಡುಗೊಂಡಿದ್ದಾರೆ ಎಂದು ಅವರನ್ನು ಬೆಂಬಲಿಸುವ ಹಲವು ನೇತಾರರು ಹೇಳಿಕೆ ನೀಡಿದ್ದರು. ಅದು ಸತ್ಯವೇ ಆಗಿದ್ದಲ್ಲಿ ಶಬರಿಮಲೆ ಕ್ಷೇತ್ರದ ಚಿನ್ನದ ಕವಚ ಹಾಗೂ ಅದರ ಇತರ ಆಸ್ತಿಗಳು ಮತ್ತು ಆಚಾರ ಅನುಷ್ಠಾನಗಳನ್ನು ಸಂರಕ್ಷಿಸಲಾಗುವುದು ಎಂಬ ಭರವಸೆಯನ್ನು ಮುಖ್ಯಮಂತ್ರಿ ನೀಡಬೇಕಾಗಿದೆ ಎಂದು ಅವರು ಹೇಳಿದರು.
ಕೇರಳದಲ್ಲಿ ಬಿಜೆಪಿಯನ್ನು ಪರಾಭವಗೊಳಿಸಲು ಎಡರಂಗ ಮತ್ತು ಐಕ್ಯರಂಗ ಈ ಬಾರಿ ನಡೆಸುತ್ತಿರುವ ಯಾವುದೇ ರೀತಿಯ ಯತ್ನಗಳು ಸಫಲಗೊಳ್ಳದು. ಕೇರಳದಲ್ಲಿ ಬಿಜೆಪಿ ಒಂದು ಅತೀ ದೊಡ್ಡ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ಅವರು ಹೇಳಿದರು.
ಜಯದೇವ ಖಂಡಿಗೆಯವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕರ್ನಾಟಕದ ಮಾಜಿ ರಾಜ್ಯ ಸದಸ್ಯ ಹಾಗೂ ಸಂಸದರಾಗಿದ್ದ ನಳಿನ್ ಕುಮಾರ್ ಕಟೀಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಬಿಜೆಪಿ ಉತ್ತರವಲಯ ಅಧ್ಯಕ್ಷ ನ್ಯಾ| ಕೆ. ಶ್ರೀಕಾಂತ್, ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ, ಇತರ ಬಿಜೆಪಿ ನೇತಾರರಾದ ಎಂ. ಸಂಜೀವ ಶೆಟ್ಟಿ, ಸುಧಾಮ ಗೋಸಾಡ, ರವೀಶ ತಂತ್ರಿ ಕುಂಟಾರು, ರಾಮಪ್ಪ ಮಂಜೇಶ್ವರ, ಪಿ.ಆರ್. ಸುನಿಲ್, ವಿಜಯ್ ಕುಮಾರ್ ರೈ, ಮುರಳೀಧರ್ ಯಾದವ್, ಅಶ್ವಿನಿ ಕೆ.ಎಂ., ಸುಕುಮಾರ್ ಕುದ್ರೆಪ್ಪಾಡಿ, ಹರೀಶ್ ನಾರಂಪಾಡಿ, ಗೋಪಾಲಕೃಷ್ಣ ಎಂ, ರವೀಂದ್ರ ರೈ ಗೋಸಾಡ, ವಿಶ್ವನಾಥ ಪ್ರಭು, ಮಧುಚಂದ್ರ ಮಾನ್ಯ, ಆನಂದ ಕೆ, ಗಣಪತಿ ಪ್ರಸಾದ್ ಕುಳಮರ್ವ, ಶ್ರೀಕೃಷ್ಣ ಭಟ್, ಸಾವಿತ್ರಿ ಅಮ್ಮ, ಮಹೇಶ್ ವಳಕುಂಜೆ, ಮಂಜುನಾಥ, ಅವಿನಾಶ್ ವಿ. ರೈ ಮತ್ತು ಸುಂದರ ಶೆಟ್ಟಿ ಕೊಲ್ಲಂಗಾನ ಮೊದಲಾದವರು ಮಾತನಾಡಿದರು.