ಕಾಸರಗೋಡು: ಮಾರ್ಗದರ್ಶಕ ಮಂಡಳಿ ನೇತೃತ್ವದಲ್ಲಿ ಸನ್ಯಾಸಿವರ್ಯರು ಮುನ್ನಡೆಸುವ ಧರ್ಮ ಸಂದೇಶ ಯಾತ್ರೆಯ ದೀಪವನ್ನು ಬ್ರಹ್ಮಶ್ರೀ ನಾರಾಯಣಗುರುಗಳು ಪ್ರತಿಷ್ಠಾಪಿಸಿದ ಮಂಗಳೂರು ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ನಡೆದ ಅದ್ದೂರಿಯ ಕಾರ್ಯಕ್ರಮದಲ್ಲಿ ಪ್ರಜ್ವಲನೆಗೊಳಿಸಲಾಯಿತು. ಮಾರ್ಗದರ್ಶಕ ಮಂಡಳಿಯ ರಾಜ್ಯ ಅಧ್ಯಕ್ಷ ಚಿದಾನಂದಮೂರ್ತಿ ಸ್ವಾಮೀಜಿ, ಕಾರ್ಯದರ್ಶಿ ಸತ್ವಾರೂಪಾನಂದ ಸ್ವಾಮೀಜಿ, ಮಹಾ ಮಂಡಳೇಶ್ವರ ಆನಂದವನಂ ಭಾರತೀ ಸ್ವಾಮೀಜಿ, ಸ್ವಾಮಿ ಅಯ್ಯಪ್ಪದಾಸ್, ಚಿನ್ಮಯಾ ಮಿಷನ್‌ನ ಕೇರಳ ಘಟಕದ ಮುಖ್ಯಸ್ಥ ವಿವಿಕ್ತಾನಂದ ಸರಸ್ವತಿ ಸ್ವಾಮೀಜಿ, ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಸ್ವಾಮಿ ಪ್ರಜ್ಞಾನಂದ ತೀರ್ಥಪಾದರು, ಸ್ವಾಮಿ ವೇದಾನಂದ ಪುರಿ ಸ್ವಾಮೀಜಿ, ಸ್ವಾಮಿ ಬ್ರಹ್ಮಾನಂದ ಪುರಿ, ಸ್ವಾಮಿ ಕೃಷ್ಣಾನಂದ ಸರಸ್ವತಿ, ಸ್ವಾಮಿ ಅಧ್ಯಾತ್ಮಾನಂದ ಸರಸ್ವತಿ, ಸ್ವಾಮಿ ಡಾ. ಧರ್ಮಾನಂದ ಸ್ವಾಮೀಜಿ, ಸ್ವಾಮಿ ದೇವ ಚೈತನ್ಯಾನಂದ ಸರಸ್ವತಿ ಸ್ವಾಮೀಜಿ, ಪ್ರಣವ್ ಸ್ವರೂಪಾನಂದ ಸ್ವಾಮೀಜಿ, ಸೇರಿದಂತೆ ಹಲವು ಸನ್ಯಾಸಿವರ್ಯರು, ಕುಮ್ಮನಂ ರಾಜಶೇಖರನ್, ಸಿ. ಬಾಬು, ವಿ.ಕೆ. ವಿಶ್ವನಾಥನ್, ಸ್ವಾಗತ ಸಂಘ ಅಧ್ಯಕ್ಷ ಧುಸೂದನನ್ ನಾಯರ್ ಮೊದಲಾದವರು ಭಾಗವಹಿಸಿದರು.
ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಸೇರಿದಂತೆ ಹಲವು ಸನ್ಯಾಸಿ ವರ್ಯರು ತಲಪಾಡಿ ತನಕ ಈ ದೀಪಯಾತ್ರೆಯ ಜತೆಗಿದ್ದರು. ನಂತರ ತಲಪ್ಪಾಡಿಯಿಂದ ಕೇರಳಕ್ಕೆ ಪ್ರವೇಶಿಸಿದ ದೀಪಯಾತ್ರೆಗೆ ತಲಪಾಡಿಯಲ್ಲಿ ಉಪ್ಪಳ ಕೊಂಡೆವೂರು ಆಶ್ರಮದ ನೇತೃತ್ವದಲ್ಲಿ ಸ್ವಾಗತ ನೀಡಲಾಯಿತು. ಬಳಿಕ ರಾತ್ರಿ ಮಧೂರು ಶ್ರೀ ಮದನಂತೇಶ್ವರ ದೇಗುಲಕ್ಕೆ ಬಂದು ಸೇರಿತು. ಆ ದೀಪ ಯಾತ್ರೆ ಅಲ್ಲಿಂದ ಇಂದು ಬೆಳಿಗ್ಗೆ ಸನ್ಯಾಸಿ ವರ್ಯರು, ಶ್ರೀ ಕ್ಷೇತ್ರದ ಪದಾಧಿಕಾರಿಗಳು ಮತ್ತು ವಿವಿಧ ಸಮುದಾಯ ಸಂಘಟನೆಗಳ ನೇತಾರರುಗಳ ನೇತೃತ್ವದಲ್ಲಿ ಚಿನ್ಮಯ ವಿದ್ಯಾಲಯಕ್ಕೆ ಆಗಮಿಸಿತು. ನಂತರ ಚಿನ್ಮಯ ವಿದ್ಯಾಲಯದ ಸಿಬಿಸಿ ಸಭಾಂಗಣದಲ್ಲಿ ಇಂದು ಬೆಳಿಗ್ಗೆ ಹಿಂದೂ ಸಮ್ಮೇಳನ ಕಾರ್ಯಕ್ರಮ ಆರಂಭಗೊಂಡಿತು. ಮಧ್ಯಾಹ್ನ 2.30ಕ್ಕೆ ದೀಪಯಾತ್ರೆ ನಗರದ ಕರಂದಕ್ಕಾಡಿಗೆ ಆಗಮಿಸಲಿದ್ದು, ಅಲ್ಲಿಂದ ಅದು ಮುತ್ತುಕೊಡೆ, ವಾದ್ಯ ಘೋಷಗಳೊಂದಿಗೆ ತಾಳಿಪಡ್ಪು ಮೈದಾನಕ್ಕೆ ಶೋಭಾಯಾತ್ರೆ ಮೂಲಕ ಸಾಗಲಿದೆ. ಬಳಿಕ 3 ಗಂಟೆಗೆ ಧರ್ಮಸಂದೇಶ ಯಾತ್ರೆಯ ಉದ್ಘಾಟನೆ ನಡೆಯಲಿದೆ.
ಕೊಳತ್ತೂರು ಅದ್ವೈತಾಶ್ರಮದ ಮಠಾಧೀಶ ಹಾಗೂ ಮಾರ್ಗದರ್ಶನ ಮಂಡಳಿ ರಾಜ್ಯ ಅಧ್ಯಕ್ಷರೂ ಆಗಿರುವ ಸ್ವಾಮಿ ಚಿದಾನಂದ ಪುರಿ ಸ್ವಾಮೀಜಿ ಮುಖ್ಯ ಭಾಷಣ ಮಾಡುವರು. ಹಲವು ಸನ್ಯಾಸಿವರ್ಯರು, ಧಾರ್ಮಿಕ ನೇತಾರರು ಇದರಲ್ಲಿ ಭಾಗವಹಿಸಿ ಮಾತನಾಡುವರು. ಬಳಿಕ ತಾಳಿಪಡ್ಪು ಮೈದಾನದಿಂದ ಯಾತ್ರೆ ಪ್ರಯಾಣ ಆರಂಭಿಸಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪರ್ಯಟನೆ ನಡೆಸಿದ ಬಳಿಕ ಅಕ್ಟೋಬರ್ 21ರಂದು ತಿರುವನಂತಪುರದಲ್ಲಿ ಸಮಾಪ್ತಿಹೊಂದಲಿದೆ.