ತಾಮರಶ್ಶೇರಿಯಲ್ಲಿ ಸರಕಾರಿ ವೈದ್ಯರ ಕೊಲೆಗೆ ಯತ್ನ: ವೈದ್ಯರುಗಳಿಂದ ಜನರಲ್ ಆಸ್ಪತ್ರೆಯಲ್ಲಿ ಪ್ರತಿಭಟನೆ

ಕಾಸರಗೋಡು: ತಾಮರಶ್ಶೇರಿ ಸರಕಾರಿ ತಾಲೂಕು ಆಸ್ಪತ್ರೆಯ ವೈದ್ಯ ಪಿ.ಟಿ. ವಿಪಿನ್ (35)ರ  ತಲೆಗೆ ಕಡಿದು ಅವರನ್ನುಕೊಲೆಗೈಯ್ಯಲೆತ್ನಿಸಿ ದುದನ್ನು ಪ್ರತಿಭಟಿಸಿ ಕೇರಳ ಗವರ್ಮೆಂಟ್ ಮೆಡಿಕಲ್ ಆಫೀಸರ್ಸ್ ಅಸೋಸಿಯೇಶನ್ (ಕೆಜಿಎಂಒಎ) ಮತ್ತು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ (ಐಎಂಎ) ನೇತೃತ್ವದಲ್ಲಿ  ವೈದ್ಯರುಗಳು ಇಂದು ಬೆಳಿಗ್ಗೆ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ತೀವ್ರ ಪ್ರತಿಭಟನೆ ನಡೆಸಿದರು.

ಕೆಜಿಎಂಒಎ ಜಿಲ್ಲಾಧ್ಯಕ್ಷೆ ಡಾ. ಶಮೀಮಾ ತನ್ವೀರ್, ಐಎಂಎ ಕಾಸರಗೋಡು ಶಾಖಾ ಅಧ್ಯಕ್ಷ ಡಾ| ಬಿ. ನಾರಾಯಣ ನಾಯ್ಕ್, ಡಾ| ಸಿ.ಎಚ್. ಜನಾರ್ದನ ನಾಯ್ಕ್, ಡಾ| ಜಮಾಲ್ ಅಹಮ್ಮದ್, ಡಾ| ಅನಂತರಾಮ್, ಡಾ| ಸಾರಿಕಾ, ಡಾ| ಶಮೀಮಾ, ಡಾ| ನಿಖಿಲ್, ಡಾ|ಜಿತೇಂದ್ರ ರೈ, ಡಾ| ಎ.ಬಿ. ಸಪ್ನ ಮೊದಲಾದವರು  ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ಮೆದುಳು ತಿನ್ನುವ ಅಮೀಬಿಕ್ ಮೆದುಳು ಜ್ವರ ತಗಲಿ ಚಿಕಿತ್ಸೆಯಲ್ಲಿದ್ದ ೯ ವರ್ಷದ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದನು. ಅದರಿಂದ ಕುಪಿತನಾದ ಬಾಲಕನ ತಂದೆ ಕೋರಂಗಾಡ್  ಆನಪಾರಪೊಯಿಲ್ ನಿವಾಸಿ  ಸನೂಪ್ (40) ಎಂಬಾತ ಚೀಲದಲ್ಲಿ ತಲ್ವಾರಿನೊಂದಿಗೆ ನಿನ್ನೆ ಆಸ್ಪತ್ರೆಗೆ ಬಂದು ಆಸ್ಪತ್ರೆಯ ಸುಪರಿನ್‌ಟೆಂಡೆಂಟ್ ಎಂದು ತಪ್ಪಾಗಿ ಗ್ರಹಿಸಿ ಆಸ್ಪತ್ರೆಯ ಅಸಿಸ್ಟೆಂಟ್ ಸರ್ಜನ್   ಡಾ.ಪಿ.ಟಿ.ವಿಪಿನ್ (೩೫)ರ ತಲೆಗೆ ಕಡಿದು ಕೊಲೆಗೈಯ್ಯಲೆತ್ನಿಸಿದ್ದನು. ಇದರಿಂದ ಗಂಭೀರ ಗಾಯಗೊಂಡ ಅವರನ್ನು ಕಲ್ಲಿಕೋಟೆಯ  ಬೋಬಿ ಮೆಮೋರಿಯಲ್ ಆಸ್ಪತ್ರೆಗೆ ಸಾಗಿಸಿ ಶಸ್ತ್ರಕ್ರಿಯೆಗೊಳಪಡಿ ಸಲಾಯಿತು. ಅದಕ್ಕೆ ಸಂಬಂಧಿಸಿ   ಸನೂಪ್‌ನನ್ನು ಪೊಲೀಸರು ತಕ್ಷಣ ಬಂಧಿಸಿ ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವೈದ್ಯರನ್ನು  ಕೊಲೆಗೈಯ್ಯಲೆತ್ನಿಸಿದ ದುಷ್ಕೃತ್ಯವನ್ನು ಪ್ರತಿಭಟಿಸಿ  ಕೆಜಿಎಂಒಎ ಮತ್ತು ಐಎಂಎ ನೇತೃತ್ವದಲ್ಲಿ ಇಂದು ವೈದ್ಯರು ರಾಜ್ಯ ವ್ಯಾಪಕವಾಗಿ ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಪ್ರತಿಭಟನೆ ನಡೆಸಿದವು.

You cannot copy contents of this page