ತಿರುವನಂತಪುರ: ಅರ್ಬುದ ರೋಗಿಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಸಂಪೂರ್ಣ ಉಚಿತ ಪ್ರಯಾಣ ಏರ್ಪಡಿಸುವ ಭಾರೀ ದೊಡ್ಡ ಘೋಷಣೆಯನ್ನು ಸಾರಿಗೆ ಸಚಿವ ಕೆ.ಬಿ. ಗಣೇಶ್ ಕುಮಾರ್ ಇಂದು ಬೆಳಿಗ್ಗೆ ವಿಧಾನಸಭೆಯಲ್ಲಿ ಮೊಳಗಿಸಿದ್ದಾರೆ.
ಸೂಪರ್ ಫಾಸ್ಟ್ ಶ್ರೇಣಿಗಿಂತ ಕೆಳಗಿನ ಎಲ್ಲಾ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲೂ ಕ್ಯಾನ್ಸರ್ ರೋಗಿಗಳಿಗೆ ಉಚಿತ ಪ್ರಯಾಣ ಸೌಕರ್ಯ ಏರ್ಪಡಿಸಲಾಗುವುದೆಂದು ಸಚಿವರು ವ್ಯಕ್ತಪಡಿಸಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಕ್ಯಾನ್ಸರ್ ರೋಗಿಗಳಿಗೂ ಈ ಉಚಿತ ಪ್ರಯಾಣ ಸೌಕರ್ಯ ಲಭಿಸಲಿದೆ. ಈ ಘೋಷಣೆಯನ್ನು ಕೆಎಸ್‌ಆರ್‌ಟಿಸಿ ನಿರ್ದೇಶಕ ಮಂಡಳಿ ಇಂದು ವಿದ್ಯುಕ್ತವಾಗಿ ಹೊರಡಿಸಲಿದೆಯೆಂದು ಸಚಿವರು ತಿಳಿಸಿದ್ದಾರೆ. ಈ ಘೋಷಣೆ ಮೊಳಗಿಸುವ ವೇಳೆ ವಿಪಕ್ಷೀಯರು ವಿಧಾನಸಭೆಯಲ್ಲಿ ಸದ್ದುಗದ್ದಲ ಸೃಷ್ಟಿಸಿರುವುದನ್ನು ತೀವ್ರವಾಗಿ ಟೀಕಿಸಿದ ಸಚಿವರು ಅಂತಹ ಪ್ರತಿಭಟನೆಯಿಂದ ಅವರು ಹಿಂದಕ್ಕೆ ಸರಿಯಬೇಕೆಂದು ಕೇಳಿಕೊಂಡರು. ಆದರೆ ವಿಪಕ್ಷೀಯರು ಸಚಿವರ ಮಾತನ್ನು ಗಣನೆಗೆ ತೆಗೆದುಕೊಳ್ಳದೆ ಶಬರಿಮಲೆಯ ಚಿನ್ನ ನಾಪತ್ತೆಯಾದ ವಿಷಯವನ್ನು ಎತ್ತಿ ಹಿಡಿದು ವಿಧಾನಸಭೆಯಲ್ಲಿ ಇಂದೂ ಪ್ರತಿಭಟನೆ ಮುಂದುವರಿಸಿದರು.







