ತಿರುವನಂತಪುರ: ರಾಜ್ಯದ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಆರಂಭ ಗೊಂಡು ಹತ್ತನೇ ತರಗತಿ ತನಕ ಮಲಯಾಳಂ ಭಾಷೆ ಕಲಿಕೆಯನ್ನು ಕಡ್ಡಾಯಗೊಳಿಸುವ ವಿಧೇಯಕಕ್ಕೆ ರಾಜ್ಯ ವಿಧಾನಸಭೆ ಅನುಮೋದನೆ ನೀಡಿದೆ.
ಹೊರ ರಾಜ್ಯಗಳಲ್ಲಿ ಕಲಿತು ಬಳಿಕ ಕೇರಳದಲ್ಲಿ ೯ ಮತ್ತು ೧೦ನೇ ತರಗತಿಗೆ ಸೇರುವ ವಿದ್ಯಾರ್ಥಿಗಳಿಗೆ ಈ ಮಸೂದೆಯಲ್ಲಿ ಮಲಯಾಳಂ ಭಾಷಾ ಕಲಿಕೆ ಕಡ್ಡಾಯಗೊಳಿಸಲಾಗಿಲ್ಲ. ಇಂತಹ ವಿದ್ಯಾರ್ಥಿಗಳು ಇಚ್ಛಿಸಿದಲ್ಲಿ ಅವರು ಮಲಯಾಳಂ ಭಾಷೆ ಆಯ್ಕೆ ಮಾಡಬಹುದೆಂದು ಈ ವಿಧಯಕದಲ್ಲಿ ತಿಳಿಸಲಾಗಿದೆ.
ಇದೇ ಸಂದರ್ಭದಲ್ಲಿ ಕಾಸg ಗೋಡು ಜಿಲ್ಲೆಯ ಕನ್ನಡ ಭಾಷಾ ಅಲ್ಪಸಂಖ್ಯಾತರು ಮತ್ತು ಇಡುಕ್ಕಿ ಜಿಲ್ಲೆಯ ತಮಿಳು ಭಾಷಾ ಅಲ್ಪ ಸಂಖ್ಯಾತರನ್ನು ಕಡ್ಡಾಯ ಮಲಯಾಳಂ ಭಾಷಾ ಕಲಿಕೆಯಿಂದ ಹೊರತು ಪಡಿಸುವ ಬಗ್ಗೆ ಈ ಮಸೂದೆಯಲ್ಲಿ ಯಾವುದೇ ರೀತಿ ಉಲ್ಲೇಖನೆಯಿಲ್ಲ. ಇದು ಕೇರಳದ ಕನ್ನಡ ಮತ್ತು ತಮಿಳು ಭಾಷಾ ಅಲ್ಪಸಂಖ್ಯಾತರನ್ನು ತೀವ್ರ ಕಳವಳಕ್ಕೀಡುಮಾಡುವಂತೆ ಮಾಡಿದೆ. ಈ ವಿಷಯದಲ್ಲಿ ರಾಜ್ಯ ಸರಕಾರ ಯಾವುದೇ ರೀತಿಯ ಸ್ಪಷ್ಟನೆಯನ್ನೂ ನೀಡಿಲ್ಲ. ಮಲಯಾಳಂ ಭಾಷೆಗಾಗಿ ಪ್ರತ್ಯೇಕ ಇಲಾಖೆ, ಅದಕ್ಕೆ ಸಚಿವರು ಮತ್ತು ನಿರ್ದೇಶನಾಲಯವನ್ನು ತೆರೆಯುವ ಅಂಶವೂ ಈ ಮಸೂದೆಯಲ್ಲಿ ಒಳಗೊಂಡಿದೆ. ರಾಜ್ಯ ಕಾನೂನು ಖಾತೆ ಸಚಿವ ಪಿ. ರಾಜೀವನ್ ಈ ಮಸೂದೆಯನ್ನು ಸದನದ ಅನುಮೋದನೆಗಾಗಿ ವಿಧಾನಸಭೆಯಲ್ಲಿ ಮಂಡಿಸಿದ್ದರು.
ತಿರುವನಂತಪುರದ ಸೆಕ್ರೆಟರಿ ಯೇಟ್ನ ಅಧಿಕಾರಿ ವರ್ಗ ಆಡಳಿತ ಸುಧಾರಣೆ (ಔದ್ಯೋಗಿಕ ಭಾಷೆ) ಇಲಾಖೆಯ ಹೆಸರನ್ನು ಇನ್ನು ಮಲ ಯಾಳಂ ಭಾಷೆ ಅಭಿವೃದ್ಧಿ ಇಲಾಖೆ ಎಂದು ಮರು ನಾಮಕರಣ ಗೊಳಿಸಲಾಗುವುದು. ಇದರ ಹೊರತಾಗಿ ಜಿಲ್ಲಾ ನ್ಯಾಯಾಲಯದಿಂದ ಆರಂಭಗೊಂಡು ಕೆಳ ನ್ಯಾಯಾಲಯದ ಎಲ್ಲಾ ವ್ಯವಹಾರಗಳು, ತೀರ್ಪುಗಳನ್ನು ಹೈಕೋರ್ಟ್ನ ಅನುಮತಿ ಪಡೆದು ಮಲಯಾಳಂ ಭಾಷೆಯಲ್ಲಾಗಿಸಲಾಗುವುದು. ಮಾತ್ರವಲ್ಲ ರಾಜ್ಯ ಸರಕಾರದ ಆದೇಶಗಳು, ಅಧಿಸೂಚನೆಗಳು, ಪ್ರಕಟಣೆಗಳು, ನಿಬಂಧನೆಗಳು, ರೆಗ್ಯುಲೇಶನ್, ಮಸೂದೆಗಳು, ಕಾನೂನುಗಳು ಮತ್ತು ಅಧ್ಯಾದೇಶಗಳನ್ನು ಈ ಮಸೂದೆ ಪ್ರಕಾರ ಇನ್ನು ಮಲಯಾಳಂ ಭಾಷೆಯಲ್ಲೇ ಹೊರಡಿಸಲಾಗುವುದು.
ಕೇಂದ್ರ-ರಾಜ್ಯ ಕಾನೂನುಗಳು, ತಿದ್ದುಪಡಿಗಳನ್ನು ನಿಗದಿತ ಅವಧಿ ಯೊಳಗಾಗಿ ಮಲೆಯಾಳಂ ಭಾಷೆಗೆ ಅನುವಾದ ಮಾಡಲಾಗುವುದು. ಇ-ಗವರ್ನೆನ್ಸ್,ಸರಕಾರಿ ವೆಬ್ಸೈಟ್ಗಳು, ಮೊಬೈಲ್ ಆಪ್ಗಳಲ್ಲ್ಲೂ ಮಲ ಯಾಳಂ ಭಾಷೆಯ ಪ್ರತಿಗಳು ಇರಲಿವೆ. ಪಿಎಸ್ಸಿ, ಸರಕಾರಿ ಕಾನೂನುಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳು ಇತ್ಯಾದಿಗಳನ್ನು ಮಲಯಾಳಂ ಪಾರಮ್ಯ ಘಟಕವನ್ನಾಗಿಸುವ ಅಂಶವನ್ನು ಈ ವಿಧೇಯಕದಲ್ಲಿ ಒಳಪಡಿಸಲಾಗಿದೆ.
ಕೇರಳದಲ್ಲಿ ಮಲಯಾಳಂ ಭಾಷೆ ಕಲಿಕೆಯನ್ನು ಕಡ್ಡಾಯಗೊಳಿಸುವ ವಿಧೇಯಕವನ್ನು ೨೦೧೫ರಲ್ಲೇ ರಾಜ್ಯ ವಿಧಾನಸಭೆ ಅಂಗೀಕಾರ ನೀಡಿತ್ತು. ಆದರೆ ಅದಕ್ಕೆ ರಾಷ್ಟ್ರಪತಿಯವರು ಅಂಗೀಕಾರ ನೀಡಿರಲಿಲ್ಲ. ಆ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಈ ಹೊಸ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸಿದ್ದು, ಅದಕ್ಕೆ ಸದನ ಅನುಮೋದನೆ ನೀಡಿದೆ.







