ಕುಂಬಳೆ: ಪೇಟೆಯಲ್ಲಿ ಕಂಡು ಬರುತ್ತಿರುವ ಸಾರಿಗೆ ಅಡಚಣೆ ನಿವಾರಣೆ ಅಂಗವಾಗಿ ಪೊಲೀಸರು ಏರ್ಪಡಿಸಿದ ಟ್ರಾಫಿಕ್ ಪರಿಷ್ಕರಣೆ ಇಂದಿನಿಂದ ಜ್ಯಾರಿಗೆ ಬಂದಿದೆ. ಇಂದಿನಿಂದ ಈ ತಿಂಗಳ 16ರವರೆಗೆ ಈ ವ್ಯವಸ್ಥೆಯನ್ನು ಪ್ರಯೋಗಾರ್ಥವಾಗಿ ಜ್ಯಾರಿಗೊಳಿಸಲಾಗುತ್ತಿದೆ. 16ರ ಬಳಿಕ ಇದನ್ನು ಶಾಶ್ವತಗೊಳಿಸಲಾಗುವುದು. ಅನಂತರ ಟ್ರಾಫಿಕ್ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.
ನೂತನ ಟ್ರಾಫಿಕ್ ಪರಿಷ್ಕಾರದಂತೆ ಕುಂಬಳೆ- ಬದಿಯಡ್ಕ ರಸ್ತೆಯಲ್ಲಿ ನಿರ್ಮಿಸಲಾದ ೬ ಬಸ್ ವೈಟಿಂಗ್ ಶೆಡ್‌ಗಳ ಮುಂಭಾಗದಲ್ಲೇ ವಿವಿಧ ಭಾಗಗಳಿಗೆ ತೆರಳುವ ಬಸ್‌ಗಳನ್ನು ನಿಲ್ಲಿಸಬೇಕಾಗಿದೆ. ಇದರಂತೆ ಕುಂಬಳೆ- ಬದಿಯಡ್ಕ ರಸ್ತೆಯ ಒಂದು ಭಾಗದಲ್ಲಿರುವ 5 ವೈಟಿಂಗ್ ಶೆಡ್‌ಗಳ ಪೈಕಿ ಯಥಾ ಕ್ರಮ ಕಳತ್ತೂರು, ಬಂಬ್ರಾಣ ಭಾಗಕ್ಕೆ, ಮಂಗಳೂರು ಭಾಗಕ್ಕೆ ತೆರಳುವ ಕೆಎಸ್‌ಆರ್‌ಟಿಸಿ ಬಸ್‌ಗಳು, ಕಾಸರಗೋಡು ಭಾಗಕ್ಕೆ ತೆರಳುವ ಕೆಎಸ್‌ಆರ್‌ಟಿಸಿ ಬಸ್‌ಗಳು, ತಲಪಾಡಿ, ಬಂದ್ಯೋಡು, ಧರ್ಮತ್ತಡ್ಕ ಭಾಗಕ್ಕೆ ತೆರಳುವ ಖಾಸಗಿ ಬಸ್‌ಗಳು, ಕಾಸರಗೋಡು ಭಾಗಕ್ಕೆ ತೆರಳುವ ಲೋಕಲ್ ಬಸ್‌ಗಳನ್ನು ನಿಲ್ಲಿಸಬೇಕಾಗಿದೆ. ಅದೇ ರೀತಿ ಇನ್ನೊಂದು ಭಾಗದಲ್ಲಿ ಪೆರ್ಲ, ಸೀತಾಂಗೋಳಿ, ಬದಿಯಡ್ಕ, ಮುಳ್ಳೇರಿಯ ಭಾಗಕ್ಕೆ ತೆರಳುವ ಖಾಸಗಿ ಬಸ್‌ಗಳನ್ನು ನಿಲುಗಡೆಗೊಳಿಸಬೇಕಾಗಿದೆ. ಅದೇ ರೀತಿ ಆಟೋರಿಕ್ಷಾಗಳನ್ನು ಕುಂಬಳೆ ಪ್ರಕಾಶ್ ಮೆಡಿಕಲ್ ಬಳಿಯಿಂದ ಬದಿಯಡ್ಕ ರಸ್ತೆಯಲ್ಲಿರುವ ಒಬರ್ಲೆ ಕಾಂಪ್ಲೆಕ್ಸ್‌ವರೆಗೆ ಹಾಗೂ ಪೊಲೀಸ್ ಠಾಣೆ ರಸ್ತೆಯಲ್ಲಿ ಕ್ಯೂ ಸಿಸ್ಟಮ್‌ನಲ್ಲಿ ನಿಲ್ಲಿಸಬೇಕಾಗಿದೆ. ಖಾಸಗಿ ವಾಹನಗಳನ್ನು ಪೊಲೀಸ್ ಠಾಣೆ ರಸ್ತೆಯಲ್ಲೂ ಹಾಗೂ ಪಂಚಾಯತ್ ರಸ್ತೆಯಲ್ಲಿ ನಿಲ್ಲಿಸಬೇಕೆಂದು ಪೊಲೀಸರು ತಿಳಿಸಿದ್ದಾರೆ. ಇಂದು ಬೆಳಿಗ್ಗೆ ನಡೆದ ಟ್ರಾಫಿಕ್ ಪರಿಷ್ಕರಣೆಗೆ ಇನ್ಸ್‌ಪೆಕ್ಟರ್ ಪಿ.ಕೆ. ಜಿಜೀಶ್, ಎಸ್‌ಐಗಳಾದ ಶ್ರೀಜೇಶ್, ಪ್ರದೀಪ್ ಕುಮಾರ್, ಪ್ರೊಬೆಶನರಿ ಎಸ್‌ಐ ಅನಂತಕೃಷ್ಣನ್ ಆರ್. ಮೆನೋನ್ ನೇತೃತ್ವ ನೀಡಿದರು.