ಕುಂಬಳೆ: ನಿನ್ನೆ ರಾತ್ರಿ ಸುರಿದ ಗಾಳಿ ಮಳೆಗೆ ತೆಂಗಿನಮರವೊಂದು ಬುಡಸಮೇತ ಮಗುಚಿ ವಿದ್ಯುತ್ ಕಂಬ ಹಾಗೂ ಮನೆ ಮೇಲೆ ಬಿದ್ದು ಹಾನಿಯುಂಟಾದ ಘಟನೆ ನಡೆದಿದೆ. ಆರಿಕ್ಕಾಡಿ ಕಡವತ್ನ ಖಾತಿಂ ಎಂಬವರ ಹೆಂಚಿನ ಮನೆಗೆ ತೆಂಗಿನ ಮರ ಬಿದ್ದಿದೆ. ನಿನ್ನೆ ರಾತ್ರಿ ೯.೩೦ರ ವೇಳೆ ಗಾಳಿ ಮಳೆಗೆ ತೆಂಗಿನ ಮರ ಮನೆ ಮೇಲೆ ಬಿದ್ದಿದ್ದು, ಇದರಿಂದ ಮನೆ ಆಂಶಿಕವಾಗಿ ಹಾನಿಗೊಂಡಿದೆ. ಇದೇ ಪರಿಸರದಲ್ಲಿರುವ ವಿದ್ಯುತ್ ಕಂಬ ಕೂಡಾ ಮುರಿದು ಬಿದ್ದಿದೆ. ಘಟನೆ ವೇಳೆ ಮನೆಯೊಳಗೆ ಖಾತಿಂ ಹಾಗೂ ಪತ್ನಿ, ಮಕ್ಕಳಿದ್ದು ಶಬ್ದ ಕೇಳಿ ಇವರು ಹೊರಗೆ ಓಡಿದುದರಿಂದ ಅಪಾಯದಿಂದ ಪಾರಾಗಿದ್ದಾರೆ. ವಿಷಯ ತಿಳಿದು ಸ್ಥಳೀಯರು ತಲುಪಿ ಹಾನಿಗೀಡಾದ ಮನೆಗೆ ಟರ್ಪಾಲ್ ಹೊದಿಸಿ ವಾಸಕ್ಕೆ ತಾತ್ಕಾಲಿಕ ಸೌಕರ್ಯವೊದಗಿಸಿಕೊಟ್ಟಿದ್ದಾರೆ.
ಬಂಬ್ರಾಣ ಚೋಕ್ರಿಗಲ್ಲಿ ಎಂಬಲ್ಲಿಯೂ ತೆಂಗಿನ ಮರವೊಂದು ಬಿದ್ದು ವಿದ್ಯುತ್ ಕಂಬ ತುಂಡಾಗಿ ಬಿದ್ದಿದೆ. ಇದರಿಂದ ಕೆಎಸ್ಇಬಿ ಅನಂತಪುರ ಸೆಕ್ಷನ್ ಕಚೇರಿ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿಯಿಂದ ವಿದ್ಯುತ್ ಮೊಟಕುಗೊಂಡಿದ್ದು, ಜನರು ತೀವ್ರ ಸಮಸ್ಯೆ ಎದುರಿಸಬೇಕಾಗಿ ಬಂತು.