ಕಾಸರಗೋಡು: ಮನೆಯ ಬೆಡ್‌ರೂಮ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಯುವತಿಯನ್ನು ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಕಾರು ನಿಯಂತ್ರಣ ತಪ್ಪಿ ಮಗುಚಿ ಬಿದ್ದು ಯುವತಿ ಸಾವಿಗೀಡಾಗಿ ಮೂವರು ಗಾಯಗೊಂಡ ಘಟನೆ ಸಂಭವಿಸಿದೆ. ಬೇತೂರುಪಾರ ತಟ್ಟರಕುಂಡ್‌ನ ದಿ| ಬಾಬು ಎಂಬವರ ಪುತ್ರಿಯೂ ಕಾಸರ ಗೋಡಿನ ಖಾಸಗಿ ಆಸ್ಪತ್ರೆಯ ದ್ವಿತೀಯ ವರ್ಷ ನರ್ಸಿಂಗ್ ವಿದ್ಯಾರ್ಥಿನಿಯಾದ ಮಹಿಮಾ (20) ಎಂಬಾಕೆ ಸಾವನ್ನಪ್ಪಿದ ಯುವತಿ. ಈಕೆ ನಿನ್ನೆ ಬೆಳಿಗ್ಗೆ ಮನೆಯ ಬೆಡ್‌ರೂಮ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಈ ಬಗ್ಗೆ ಗಮನಕ್ಕೆ ಬಂದ ಸಹೋದರ ಕೊಠಡಿಯ ಬಾಗಿಲು ಮುರಿದು ಆಕೆಯನ್ನು ಸಮೀಪದ ಕೆ.ಸಿ. ವಿನೋದ್ ಎಂಬವರ ಕಾರಿನಲ್ಲಿ ಆಸ್ಪತ್ರೆಗೆ ಕೊಂಡೊಯ್ಯ ಲಾಗಿತ್ತು. ಮನೆಯಿಂದ ಎರಡು ಕಿಲೋ ಮೀಟರ್ ದೂರಕ್ಕೆ ತಲುಪಿದಾಗ ಕಾರು ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಘಟನೆಯನ್ನು ಕಂಡ ಊರವರು ಸ್ಥಳಕ್ಕೆ ತಲುಪಿ ಮಹಿಮಾಳನ್ನು ಬೇರೊಂದು ಕಾರಿನಲ್ಲಿ ಚೆರ್ಕಳದ ಆಸ್ಪತ್ರೆಗೆ ಸಾಗಿಸಿದರೂ ಆಕೆಯ ಪ್ರಾಣ ಉಳಿಯಲು ಸಾಧ್ಯವಾಗಲಿಲ್ಲ. ಮೃತದೇಹವನ್ನು ಜನರಲ್ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಅಪಘಾತಕ್ಕೀಡಾದ ಕಾರನ್ನು ಚಲಾಯಿಸಿದ ಸಹೋದರ ಮಹೇಶ್ (24), ಕಾರಿನಲ್ಲಿದ್ದ ಆತನ ತಾಯಿ ವನಜ (45) ಹಾಗೂ ಸಂಬಂಧಿಕೆ ವರ್ಷ (22) ಎಂಬಿವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತು. ಘಟನೆ ಬಗ್ಗೆ ಬೇಡಗಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.







