ತಿರುವಂತಪುರ: ಶಬರಿಮಲೆ ದೇಗುಲದ ಚಿನ್ನ ಕಳವು ಪ್ರಕರಣದ ಮುಖ್ಯ ಸೂತ್ರಧಾರ ಉಣ್ಣಿಕೃಷ್ಣನ್ ಪೋತ್ತಿ ದಿಢೀರ್ ಅಪ್ರತ್ಯಕ್ಷಗೊಂಡಿ ದ್ದಾನೆ. ತಿರುವನಂತಪುರದಿಂದ ಪಾಲಕ್ಕಾಡಿಗೆ ಹೋಗುವುದಾಗಿ ತಿಳಿಸಿದ ಆತ ಬಳಿಕ ಅಪ್ರತ್ಯಕ್ಷನಾಗಿದ್ದಾನೆ. ಇದೇ ವೇಳೆ ಈ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡ ಆತನನ್ನು ವಶಕ್ಕೆ ತೆಗೆದು ವಿಚಾರಣೆಗೊಳಪಡಿಸುತ್ತಿರುವು ದಾಗಿಯೂ ಶಂಕಿಸಲಾಗುತ್ತಿದೆ. ಚಿನ್ನ ಕಳವಿನ ಹೆಸರಲ್ಲಿ ಪೋತ್ತಿಗೆ ಪ್ರಾಣ ಬೆದರಿಕೆಯುಂಟಾಗಿದೆಯೆಂಬ ರೀತಿಯ ಪ್ರಚಾರಗಳು ಇನ್ನೊಂದೆಡೆ ನಡೆಯುತ್ತಿವೆ. ಶಬರಿಮಲೆ ದೇಗುಲದ ಚಿನ್ನ ಕದ್ದ ಪ್ರಕರಣದಲ್ಲಿ ಪೋತ್ತಿ ಒಂದನೇ ಆರೋಪಿಯಾಗಿದ್ದಾನೆ. ಆದ್ದರಿಂದ ಆತನನ್ನು ವಶಕ್ಕೆ ತೆಗೆದುಕೊಂಡು ಸಮಗ್ರ ವಿಚಾರಣೆಗೊಳಪಡಿಸಲು ತನಿಖಾ ತಂಡ ಮುಂದಾಗಿರುವ ವೇಳೆಯಲ್ಲೇ ಆತ ದಿಢೀರ್ ಅಪ್ರತ್ಯಕ್ಷಗೊಂಡಿದ್ದಾನೆ. ಇದರಿಂದಾಗಿ ಆತ ತನಿಖಾ ತಂಡದ ಬಲೆಗೆ ಬಿದ್ದಿರುವ ಸುದ್ದಿಗಳೂ ಹರಡತೊಡಗಿದೆ.
ಶಬರಿಮಲೆ ಸನ್ನಿಧಾನ, ಈ ಕ್ಷೇತ್ರದ ದ್ವಾರಪಾಲಕ ಮೂರ್ತಿಗಳ ಕವಚಗಳಿಗೆ ಚಿನ್ನ ಲೇಪನ ನಡೆಸಿದ ಚೆನ್ನೈಯ ಸ್ಮಾರ್ಟ್ ಕ್ರಿಯೇಶನ್ಸ್ ಸಂಸ್ಥೆ ಮತ್ತು ಕೊಚ್ಚಿ ಸೇರಿದಂತೆ ಹಲವೆಡೆಗಳಲ್ಲಿ ವಿಶೇಷ ತಂಡ ನಡೆಸಿದ ತನಿಖೆಯಲ್ಲಿ ಉಣ್ಣಿಕೃಷ್ಣನ್ ಪೋತ್ತಿಯ ಕೈವಾಡ ಸ್ಪಷ್ಟಗೊಂಡಿದೆ. ಶಬರಿಮಲೆ ದೇಗುಲದ ಚಿನ್ನ ಕಳವು ಪ್ರಕರಣದ ತನಿಖಾ ವರದಿಯನ್ನು ಆರು ವಾರದೊಳಗಾಗಿ ಸಲ್ಲಿಸುವಂತೆ ತನಿಖಾ ತಂಡಕ್ಕೆ ಹೈಕೋರ್ಟ್ ಈಗಾಗಲೇ ನಿರ್ದೇಶ ನೀಡಿದೆ. ಮಾತ್ರವಲ್ಲ ತನಿಖೆಯ ಪ್ರಗತಿಯನ್ನು ಪ್ರತೀ ಎರಡು ವಾರಗಳಿಗೊಮ್ಮೆ ತಿಳಿಸುವಂತೆಯೂ ಹೈಕೋರ್ಟ್ ಹೇಳಿದೆ. ಈ ಮಧ್ಯೆ ನಾನು ನರ ಸಂಬಂಧಿಕ ಖಾಯಿಲೆಯಿಂದ ಬಳಲುತ್ತಿದ್ದೇನೆಂದು ಆರೋಪಿ ಪೋತ್ತಿ ದಿನಗಳ ಹಿಂದೆ ವಿಜಿಲೆನ್ಸ್ ತಂಡಕ್ಕೆ ತಿಳಿಸಿದ್ದನು. ಮಾತ್ರವಲ್ಲ ಅದನ್ನು ಸಾಬೀತುಪಡಿಸಲು ಬೆಂಗಳೂರಿನ ಖ್ಯಾತ ಆಸ್ಪತ್ರೆಯ ಸರ್ಟಿಫಿಕೇಟ್ ನ್ನು ಆತ ಹಾಜರುಪಡಿಸಿದ್ದನು. ಆ ಬಗ್ಗೆಯೂ ಇನ್ನೊಂದೆಡೆ ತನಿಖೆ ನಡೆಸುತ್ತಿದೆ. ಮಾತ್ರವಲ್ಲ ಪೋತ್ತಿ ಮಾಡಿದ ಫೋನ್ ಕರೆಗಳು ಮತ್ತು ಹೊರಗಿನಿಂದ ಬಂದ ಕರೆಗಳನ್ನು ತಂಡ ಪರಿಶೀಲಿಸುತ್ತಿದೆ.







