ಮಾನಿಷಾದ ಅಂದರೂ ಹೋಗೇ ಬಿಟ್ಟರುಅಮ್ಮಣ್ಣಾಯರು

ಎ.ಬಿ. ದಿನೇಶ್ ಬಲ್ಲಾಳ್, ಮುಳ್ಳೇರಿಯ

ಅದೊಂದು ಕಾಲವಿತ್ತು. ಮುಳ್ಳೇರಿಯ ಎಯುಪಿ ಶಾಲಾ ಮೈದಾನ ರಾತ್ರಿಯೂ ಕೂಡಾ ಹಗಲಾಗಿ ಪರಿವರ್ತನೆಯಾಗುತ್ತಿತ್ತು. ವಾರದಲ್ಲಿ ನಾಲ್ಕೈದು ಯಕ್ಷಗಾನ ಪ್ರದರ್ಶನವಿರುತ್ತಿತ್ತು. ಇದೇ ರೀತಿ ಜಿಲ್ಲೆಯ ಇತರ ಕಡೆಗಳಲ್ಲೂ ಯಕ್ಷಗಾನ ಪ್ರದರ್ಶನ ನಡೆಯುತ್ತಿತ್ತು. ಮೇಳವೊಂದು ಕಾಸರಗೋಡು ಜಿಲ್ಲೆಯಲ್ಲಿ ಪ್ರದರ್ಶನ ಆರಂಭಿಸಿದರೆ ಸುತ್ತಮುತ್ತಲ ಪ್ರದೇಶಗಳಲ್ಲೇ ವಾರಾನುಗಟ್ಟಲೆ ಪ್ರದರ್ಶನ ನೀಡುತ್ತಿದ್ದ ಕಾಲವೂ ಇತ್ತು. ಆದರೆ ಅದು ಈಗ ನೆನಪು ಮಾತ್ರ. ಜಿಲ್ಲೆಯಲ್ಲಿ ಯಕ್ಷಗಾನ ಟೆಂಟ್ ಮೇಳಗಳ ಪ್ರದರ್ಶನ ಕಡಿಮೆಯಾಗುತ್ತಾ ಬಂದಿದೆ. ಇದ್ಯಾಕೆ ಈಗ ನೆನಪಾಯಿತೆಂದರೆ ಪ್ರಸಿದ್ಧ ಭಾಗವತರಾದ ದಿನೇಶ್ ಅಮ್ಮಣ್ಣಾಯ ಇನ್ನಿಲ್ಲ ಎನ್ನುವಾಗ … ಅವರು ರಾತ್ರಿಯನ್ನು ಹಗಲು ಮಾಡಿ ಹಾಡಿದ ಹಾಡುಗಳ ಝೇಂಕಾರ ಈಗಲೂ ಕಿವಿಯಲ್ಲಿ ಮಾರ್ದನಿಸುತ್ತಿದೆ. ಯಕ್ಷಗಾನ ಪ್ರಿಯರಿಗೆ ಅವರ ಹಾಡುಗಳು ಎಷ್ಟು ಬಾರಿ ಕೇಳಿದರೂ ಸಾಕೆನಿಸುತ್ತಿರಲಿಲ್ಲ. ನನ್ನ ಬಾಲ್ಯಕಾಲದಲ್ಲಿ ಯಕ್ಷಗಾನ ಬಯಲಾಟ ಪ್ರದರ್ಶನದ ತುತ್ತತುದಿಯಲ್ಲಿತ್ತು. ನಿದ್ದೆಗೆಟ್ಟು ಆಟ ನೋಡಲು ಹೋಗುತ್ತಿದ್ದುದು ಈಗಲೂ ನೆನಪಿದೆ. ‘ಮರಮಲ್ಲಿಗೆ ಪೊರ್ಲು ಉಂಡುಯೆ ತಿರುಗೊಡು ನಮ ಅವುಲು’ ಮುಳ್ಳೇರಿಯ ಶಾಲಾ ಮೈದಾನದ ಕಂಬದಲ್ಲಿ ಕಟ್ಟಿದ ಮೆಗಾ ಫೋನ್‌ನಿಂದ ಹೊರ ಬರುತ್ತಿದ್ದ  ಪದ್ಯ ಅದು ದಿನೇಶ್ ಅಮ್ಮಣ್ಣಾಯರ ಸ್ವರವಾಗಿತ್ತು. ಕರ್ನಾಟಕ ಮೇಳದ ಅಂದಿನ ಖ್ಯಾತ ಪ್ರಸಂಗವಾದ ‘ಕಚ್ಚೂರಮಾಲ್ದಿ’ಯ ಒಂದು ಪದ್ಯ ಅದಾಗಿತ್ತು. ಅದರಲ್ಲಿ ಮಿಜಾರು ಅಣ್ಣಪ್ಪರು ಅಜ್ಜನಾಗಿ ಮಾಲ್ದಿಯಾಗಿ ಸಂಜಯ ಕುಮಾರ್ ವೇಷ ಧರಿಸುತ್ತಿದ್ದರು. ಇದೇ ರೀತಿ ‘ಪಟ್ಟದ ಪದ್ಮಲೆ’ ‘ಬೊಳ್ಳಿಗಿಂಡೆ’ ಮೊದಲಾದ ಪ್ರಸಂಗಗಳಲ್ಲಿ ಅಮ್ಮಣ್ಣಾಯರ ಹಾಡು ಪ್ರತ್ಯೇಕವಾದ ಒಂದು ಅನುಭವ ನೀಡುತ್ತಿತ್ತು. ಅಮ್ಮಣ್ಣಾಯರ ಮಾಸ್ಟರ್ ಪೀಸ್ ಅಂದರೆ ಮಾನಿಷಾದ ಪ್ರಸಂಗದ ಹಾಡುಗಳಾಗಿವೆ. ಅದೇ ರೀತಿ ಸೀತಾ ಪರಿತ್ಯಾಗದ ಹಾಡುಗಳು ಕೂಡಾ. ‘ಬಂಗಾರ್ ಬಾಲೆ ಈ ಪಿದಯಿ ಪೋವಡೆ ಮಗಾ…’ ಈ ಹಾಡು ಕ್ಯಾಸೆಟ್ ಹಾಕಿ ಕೇಳಿದ್ದು ಎಷ್ಟು ಬಾರಿ ಎಂದು ಯಾರು ಕೂಡಾ ನೆನಪಿಟ್ಟಿರಲಿಕ್ಕಿಲ್ಲ. ಶೃಂಗಾರ, ಕರುಣಾರಸದ ಹಾಡುಗಳಿಗೆ ಅಮ್ಮಣ್ಣಾಯರಷ್ಟು ನಿಖರವಾದ ಭಾಗವತರು ಬಹಳವಿಲ್ಲ.

ತುಳು ಪ್ರಸಂಗಗಳಿಗೆ ಬಾರೀ ಮೆಚ್ಚುಗೆ ಲಭಿಸಲು ಅಮ್ಮಣ್ಣಾಯರಂತಹ ಭಾಗವತರ ಪಾಲು ಕಿರಿದಲ್ಲ, ಘಟಾನುಘಟಿಗಳಾದ ಕಲಾವಿದರನ್ನು ರಂಗಸ್ಥಳದಲ್ಲಿ ಕುಣಿಸಿದ ಅಮ್ಮಣ್ಣಾಯರು ಅಪಾರ ಅನುಭವ ಹೊಂದಿದ್ದರು. ತಮ್ಮ ಪ್ರಾಯದ ಕಾಲದಲ್ಲಿ ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದರಾದರೂ  ಸುದೀರ್ಘ 40 ವರ್ಷಕ್ಕೂ ಅಧಿಕದ ಕಲಾ ಸೇವೆಯಲ್ಲಿ ಒಬ್ಬ ಪರಿಪೂರ್ಣ ಭಾಗವತರಾಗಿ ಅವರು ಬೆಳೆದಿದ್ದಾರೆ.

1959ರ ನವೆಂಬರ್ 7ರಂದು ನಾರಾಯಣ ಅಮ್ಮಣ್ಣಾಯ- ಕಾವೇರಿ ಅಮ್ಮ ದಂಪತಿಗೆ ಜನಿಸಿದ ಇವರು ಹೈಸ್ಕೂಲ್ ಶಿಕ್ಷಣದ ಬಳಿಕ ಯಕ್ಷಗಾನವನ್ನು ಆರಿಸಿಕೊಂ ಡರು.  ತಂದೆ ಮೃದಂಗವಾದಕರಾಗಿದ್ದು, ಚಿಕ್ಕಪ್ಪ ವಿಷ್ಣು ಅಮ್ಮಣ್ಣಾಯ ಯಕ್ಷಗಾನ ಅರ್ಥಧಾರಿಯಾಗಿದ್ದರು. ಸಹೋದರಿ ರಾಜೀವಿ ಸಂಗೀತಗಾರ್ತಿಯಾಗಿದ್ದರು. ಇದು ಅಮ್ಮಣ್ಣಾಯರ ಕಲಾ ಪೋಷಣೆಗೆ ನೆರವಾಯಿತು. ಆರಂಭದಲ್ಲಿ ಪುತ್ತೂರು ಮೇಳದಲ್ಲಿ ತಿರುಗಾಟ ಆರಂಭಿಸಿದರೆ ಬಳಿಕ ಕರ್ನಾಟಕ ಮೇಳ, ಕದ್ರಿ ಮೇಳ, ಕುಂಟಾರು ಮೇಳ, ಕೊನೆಯದಾಗಿ ಎಡನೀರು ಮೇಳದಲ್ಲಿ ಇವರು ಭಾಗವತಿಕೆ ಕೈಗೊಂಡಿದ್ದಾರೆ. ಆ ಕಾಲದ ಪ್ರಸಿದ್ಧ ಭಾಗವತರಾಗಿದ್ದ ದಾಮೋದರ ಮಂಡೆಚ್ಚರಿಂದ ಭಾಗವತಿಕೆಯನ್ನು ಕಲಿತ ಇವರು ಅವರದೇ ಶೈಲಿಯ ಸಂಗೀತವನ್ನು ಹಾಡಿಗೆ ಜೋಡಿಸಿ ಹಾಡಲು ಆರಂಭಿಸಿದರು. ಬರಬರುತ್ತಾ ಅಮ್ಮಣ್ಣಾಯ ಶೈಲಿ ರೂಪುಗೊಂಡಿತು. ಸಂಗೀತವೂ ತಿಳಿದಿದ್ದ ಅಮ್ಮಣ್ಣಾಯರಿಗೆ ಹಾಡುವುದು ಅಷ್ಟು ಕಷ್ಟವಾಗಿ ಕಂಡು ಬರಲಿಲ್ಲ. ವಿಭಿನ್ನ ರಾಗಗಳಿಂದ ಜನಹೃದಯ ಗೆದ್ದ ಇವರ ಹಾಡು ಕೇಳಲೆಂದೇ ಯಕ್ಷಗಾನ ನೋಡಲು ಬರುವವರಿದ್ದರು.

ತುಳುವಾಗಿದ್ದರೂ, ಕನ್ನಡವಾಗಿದ್ದರೂ ಪ್ರಸಂಗಗಳನ್ನು ಸಮರ್ಥವಾಗಿ ಮುನ್ನಡೆಸುವ ನಿಪುಣತೆ ಇವರಲ್ಲಿತ್ತು. ಇವರ ಕಲಾ ಸೇವೆಗೆ ೪೦ಕ್ಕೂ ಅಧಿಕ ಕಡೆಗಳಲ್ಲಿ ಸನ್ಮಾನಿತರಾಗಿದ್ದಾರೆ. ಮುಂಬಯಿ, ಬೆಂಗಳೂರು, ಮಂಗಳೂರು, ಎಡನೀರು, ಉಡುಪಿ ಸಹಿತ ವಿವಿಧ ಕಡೆಗಳಲ್ಲಿ ಗೌರವ ಸ್ವೀಕರಿಸಿದ್ದಾರೆ. ಇತ್ತೀಚೆಗೆ ಎಡನೀರು ಮಠಕ್ಕೆ ಬಂದು ಪ್ರಶಸ್ತಿ ಸ್ವೀಕರಿಸುವ ಸಂದರ್ಭದಲ್ಲಿ ಎಡನೀರು ಮಠದೊಂದಿಗೆ ಹಾಗೂ ಬ್ರಹ್ಮೈಕ್ಯ ಶ್ರೀ ಕೇಶವಾನದ ಭಾರತೀ ಸ್ವಾಮೀಜಿಯವರೊಂದಿಗಿನ ಸಂಪರ್ಕದ ಬಗ್ಗೆ ಮಾತನಾಡಿದ್ದರು. ಯಕ್ಷರಸರಾಗ ಚಕ್ರವರ್ತಿ, ಗಾನಕೋಗಿಲೆ, ಯಕ್ಷಕೋಗಿಲೆ, ಮಧುರಗಾನದ ಐಸಿರಿ, ಯಕ್ಷಸಂಗೀತ ಕಲಾ ಕೌಸ್ತುಭ ಮುಂತಾದ ಬಿರುದು ಗಳಿಸಿ ಮನ್ನಣೆಗೆ ಪಾತ್ರವಾಗಿದ್ದರು.

ಬೆಳ್ತಂಗಡಿ ತಾಲೂಕು ಅರಸಿನಮಕ್ಕಿಯಲ್ಲಿ ಅಸೌಖ್ಯ ನಿಮಿತ್ತ ವಿಶ್ರಾಂತಿಯಲ್ಲಿದ್ದ ಇವರು ನಿನ್ನೆ ಇಹಲೋಕ ತ್ಯಜಿಸಿದ್ದು, ತೆಂಕು ತಿಟ್ಟು ಯಕ್ಷಗಾನಕ್ಕೆ ದೊಡ್ಡ ನಷ್ಟ ಉಂಟಾಗಿದೆ. ಪತ್ನಿ ಸುಧಾ, ಮಕ್ಕಳಾದ ಅಕ್ಷತಾ, ಅಮಿತಾರಿಗೆ ಹಾಗೂ ಯಕ್ಷಾಭಿಮಾನಿಗಳಿಗೆ ಇವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿ ಲಭಿಸಲಿ. ಕಣ್ಮರೆಯಾದ ಆತ್ಮಕ್ಕೆ ಚಿರಶಾಂತಿ ಲಭಿಸಲಿ ಎಂಬುದು ಯಕ್ಷಪ್ರಿಯರ ಪ್ರಾರ್ಥನೆ.

RELATED NEWS

You cannot copy contents of this page