ಕಾಸರಗೋಡು: ವೆಳ್ಳರಿಕುಂಡ್ ಪೊಲೀಸ್ ಠಾಣೆ ವ್ಯಾಪ್ತಿಯ ಪ್ಲಾತಡ ಎಂಬಲ್ಲಿ ಮಾವೋಯಿಸ್ಟ್ ಪೋಸ್ಟರ್ ಪತ್ತೆಯಾಗಿದ್ದು ಈ ಹಿನ್ನೆಲೆಯಲ್ಲಿ ಜಾಗ್ರತಾ ನಿರ್ದೇಶ ಹೊರಡಿಸಲಾಗಿದೆ. ವೆಳ್ಳರಿಕುಂಡ್ ಪೊಲೀಸರು ಹಾಗೂ ವಿವಿಧ ಗುಪ್ತಚರ ವಿಭಾಗದ ಅಧಿಕಾರಿಗಳು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದ್ದಾರೆ. ಪ್ಲಾತಡ ಬಸ್ ವೈಟಿಂಗ್ ಶೆಡ್ನಲ್ಲಿ ಮೂರು ಪೋಸ್ಟರ್ಗಳನ್ನು ಅಂಟಿಸಿರುವುದು ನಿನ್ನೆ ಪತ್ತೆಯಾಗಿದೆ. ವಿಷಯ ತಿಳಿದು ತಲುಪಿದ ಪೊಲೀಸರು ಪರಿಶೀಲಿಸಿ ದಾಗ ಸಮೀಪದ ಗೋಡೆಗಳಲ್ಲೂ ಪೋಸ್ಟರ್ಗಳನ್ನು ಅಂಟಿಸಿರುವುದು ಕಂಡು ಬಂದಿದೆ. ಕೂಡಲೇ ಆ ಪೋಸ್ಟರ್ಗಳನ್ನು ಪೊಲೀಸರು ತೆರವುಗೊಳಿಸಿದರು.
‘ಜನಕೀಯ ವಿಮೋಚನ ಮುನ್ನಣಿ ಏರಿಯಾ ಕಮಿಟಿ’ ಎಂಬ ಹೆಸರಿನಲ್ಲಿ ಪೋಸ್ಟರ್ ಪ್ರಕಟಿಸಲಾಗಿದೆ. ಕಂಪ್ಯೂಟರ್ ಮೂಲಕ ಮಲಯಾಳ ಲಿಪಿಯಲ್ಲಿ ಪೋಸ್ಟರ್ ಸಿದ್ಧಪಡಿಸ ಲಾಗಿದ್ದು, ವಿವಿಧ ಬೇಡಿಕೆಗಳನ್ನು ಅದರಲ್ಲಿ ಮುಂದಿರಿಸಲಾಗಿದೆ. ‘ನಾಗ್ಪುರ್ ಜೈಲಿನಲ್ಲಿರುವ ರಿಜಾಸ್ನನ್ನು ಕೂಡಲೇ ಬಿಡುಗಡೆಗೊಳಿಸಬೇಕು, ಉತ್ತರ ಭಾರತದಲ್ಲಿ ನಿರಪರಾಧಿಗಳಾದ ಆದಿವಾಸಿಗಳನ್ನು ಕೊಲೆಗೈಯ್ಯುವುದನ್ನು ನಿಲ್ಲಿಸಬೇಕು’ ಮೊದಲಾದ ಬೇಡಿಕೆಗಳನ್ನು ಪೋಸ್ಟರ್ನಲ್ಲಿ ಮುದ್ರಿಸಲಾಗಿದೆ. ಈ ಪೋಸ್ಟರ್ಗಳನ್ನು ಅಂಟಿಸಿದವರು ಯಾರೆಂದು ಪತ್ತೆಹಚ್ಚಲು ಪೊಲೀಸರು ವ್ಯಾಪಕ ತನಿಖೆ ಆರಂಭಿಸಿದ್ದಾರೆ. ಇದೇ ವೇಳೆ ಇಲ್ಲಿ ದಿಢೀರ್ ಮಾವೋಯಿಸ್ಟ್ ಪೋಸ್ಟರ್ ಕಂಡು ಬಂದಿರುವುದು ಅಧಿಕಾರಿಗಳನ್ನು ಬೆಚ್ಚಿಬೀಳಿಸಿದೆ. ಕಾಸರಗೋಡು ಜಿಲ್ಲೆಯಲ್ಲಿ ಮಾವೋಯಿಸ್ಟ್ ಪರ ಕಾರ್ಯಕರ್ತರು ಇಲ್ಲವೆಂದು ಪೊಲೀಸ್ ಅಧಿಕಾರಿಗಳು ಅಂದಾಜಿಸಿದ್ದರು. ಆದರೆ ಇದೀಗ ಪೋಸ್ಟರ್ ಪತ್ತೆಯಾದುದರಿಂದ ತನಿಖೆ ತೀವ್ರಗೊಳಿಸಲು ನಿರ್ಧರಿಸಲಾಗಿದೆ.