ಬಾವಿಗೆ ಬಿದ್ದು ಯುವಕ ಮೃತ್ಯು: ರಕ್ಷಿಸಲು ಹಾರಿದ ಸಹೋದರನಿಗೆ ಅಗ್ನಿಶಾಮಕ ದಳದಿಂದ ರಕ್ಷಣೆ

ಕುಂಬಳೆ: ಸರಕಾರಿ ನೌಕರನಾದ ಯುವಕ ಬಾವಿಗೆ ಬಿದ್ದು ಮೃತಪಟ್ಟರು. ರಕ್ಷಿಸಲೆಂದು ಇಳಿದ ಸಹೋದರನನ್ನು ಅಗ್ನಿಶಾಮಕ ದಳ ತಲುಪಿ ಮೇಲೆತ್ತಿದೆ. ಕುಂಬಳೆ ನಾರಾಯಣಮಂಗಲ ನಿವಾಸಿ ವಿವೇಕ್ ಶೆಟ್ಟಿ (28) ಮೃತಪಟ್ಟವರು. ನಿನ್ನೆ ರಾತ್ರಿ 9.30ರ ವೇಳೆ ಘಟನೆ ನಡೆದಿದೆ. ವಿವೇಕ್ ಬಾವಿಗೆ ಬೀಳುವುದನ್ನು ಕಂಡ ಸಹೋದರ ತೇಜಸ್ ಆಗಲೇ ಬಾವಿಗೆ ಹಾರಿದ್ದರು. ಆದರೆ ತೇಜಸ್ ಬಾವಿಯಲ್ಲಿ ಸಿಲುಕಿಕೊಂಡರು. ಸ್ಥಳೀಯರು ನೀಡಿದ ಮಾಹಿತಿಯಂತೆ ಉಪ್ಪಳದಿಂದ ಅಗ್ನಿಶಾಮಕ ದಳ ತಲುಪಿ ತೇಜಸ್‌ನನ್ನು ಮೊದಲಾಗಿ ಮೇಲೆತ್ತಿದರು.  ಬಳಿಕ ವಿವೇಕ್‌ನನ್ನು ಮೇಲಕ್ಕೆತ್ತಿ ಕುಂಬಳೆ ಸಹಕಾರಿ ಆಸ್ಪತ್ರೆಗೆ ಕೊಂಡೊ ಯ್ಯಲಾಯಿತಾದರೂ ಆ ವೇಳೆಗೆ ಮೃತಪಟ್ಟಿದ್ದರು. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ವಿವೇಕ್  ಲೀಗಲ್ ಮೆಟ್ರೋಲಜಿ ಇಲಾಖೆಯ ಸೀನಿಯರ್ ಕ್ಲಾರ್ಕ್ ಆಗಿದ್ದರು.  ನಾಲ್ಕು ವರ್ಷದ ಹಿಂದೆ ಆಶ್ರಿತ ನೇಮಕಾತಿಯಂತೆ ಇವರಿಗೆ ಕೆಲಸ ಲಭಿಸಿತ್ತು. ದಿ| ರಾಮಪ್ರಸಾದ್ ಶೆಟ್ಟಿ- ಗೀತ ದಂಪತಿಯ ಪುತ್ರನಾದ ಮೃತರು ಇನ್ನೋರ್ವ ಸಹೋದರ ನವನೀತ್ ಶೆಟ್ಟಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಉಪ್ಪಳ ಅಗ್ನಿಶಾಮಕದಳದ ಸ್ಟೇಷನ್ ಆಫೀಸರ್ ಬಿ. ರಾಜೇಶ್ ಕುಮಾರ್, ಉದ್ಯೋಗಸ್ಥರಾದ ಪಶುಪತಿ, ಅಥುಲ್ ರವೀಂದ್ರನ್, ವಿಬಿನ್ ಕೆ, ಹೋಮ್‌ಗಾರ್ಡ್ ಶ್ರೀನಿತ್ ಕುಮಾರ್, ಚಾಲಕ ಶರಣ್ ಶಹೀಲ್ ಕಾರ್ಯಾಚರಣೆ ನಡೆಸಿದ್ದರು.

RELATED NEWS

You cannot copy contents of this page