ಕೇರಳಕ್ಕೆ ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದವರ ಮೇಲೆ ಪೊಲೀಸ್ ಗೋಲಿಬಾರ್: ಕಾಸರಗೋಡು ನಿವಾಸಿ ಗಂಭೀರ

ಪುತ್ತೂರು: ವಾಹನದಲ್ಲಿ ಅಕ್ರಮವಾಗಿ ಕೇರಳಕ್ಕೆ ಜಾನುವಾರುಗಳನ್ನು ಸಾಗಿಸುತ್ತಿದ್ದವರ ಮೇಲೆ ಪೊಲೀಸರು ಗೋಲಿಬಾರ್ ನಡೆಸಿ ಅದರಲ್ಲಿ ಕಾಸರಗೋಡಿನ ಓರ್ವ ಗಂಭೀರ ಗಾಯಗೊಂಡ ಘಟನೆ ಪುತ್ತೂರಿಗೆ ಸಮೀಪದ ಈಶ್ವರಮಂಗಲದಲ್ಲಿ ಇಂದು ಬೆಳಿಗ್ಗೆ ನಡೆದಿದೆ.

ಲಾರಿಯಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿರುವುದನ್ನು ಕಂಡ ಪೊಲೀಸರು ಲಾರಿಯನ್ನು ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಆದರೆ ಜಾನುವಾರು ಸಾಗಾಟದವರು ಲಾರಿ ನಿಲ್ಲಿಸದೆ ಮುಂದಕ್ಕೆ ಸಾಗಿದರು. ಅದನ್ನು ಕಂಡ ಪೊಲೀಸರು ತಕ್ಷಣ ತಮ್ಮ ವಾಹನದಲ್ಲಿ ಆ ಲಾರಿಯನ್ನು ಬೆಳ್ಳಿಚಡವ್ ತನಕ ಹಿಂಬಾಲಿಸಿಕೊಂಡು ಹೋಗಿ ಕೊನೆಗೂ ಅದನ್ನು ತಡೆಹಿಡಿಯುವಲ್ಲಿ ಸಫಲರಾಗಿದ್ದಾರೆ. ಆ ವೇಳೆ ಲಾರಿಯಲ್ಲಿದ್ದವರು ಅಲ್ಲಿಂದ ಪರಾರಿಯಾಗಲೆತ್ನಿಸಿದ ವೇಳೆ ಪೊಲೀಸರ ಮೇಲೆಯೂ ಅವರು ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ. ಇದರಿಂದಾಗಿ ಆತ್ಮರಕ್ಷಣೆಗಾಗಿ ನಮಗೆ ಗೋಲಿಬಾರ್ ನಡೆಸಬೇಕಾಗಿ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗುಂಡೇಟು ತಗಲಿದ ವ್ಯಕ್ತಿಯನ್ನು ದೇಲಂಪಾಡಿ ನಿವಾಸಿ ಅಬ್ದುಲ್ಲ (40) ಎಂದು ಗುರುತಿಸಲಾಗಿದೆ. ಆತನನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಪುತ್ತೂರು ಗ್ರಾಮೀಣ ಪೊಲೀಸ್ ಠಾಣೆಯ ಪಿ.ಎಸ್.ಐ. ಜಂಬುರಾಜ್ ಮಹಾಜನ್‌ರ ನೇತೃತ್ವದ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.  ಹತ್ತು ಜಾನುವಾರು ಗಳಿದ್ದ  ಲಾರಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಎಸ್‌ಪಿ ಡಾ. ಅರುಣ್ ನೇತೃತ್ವದ ಉನ್ನತ ಪೊಲೀಸ್ ಅಧಿಕಾರಿಗಳು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಆರಂಭಿಸಿದ್ದಾರೆ.

RELATED NEWS

You cannot copy contents of this page