ಕಾಸರಗೋಡು: ಬೇರೆ ಧರ್ಮದ ವ್ಯಕ್ತಿಯನ್ನು ಪ್ರೀತಿಸಿದ ಹಿನ್ನೆಲೆಯಲ್ಲಿ ಮಗಳನ್ನು ಗೃಹಬಂಧನದಲ್ಲಿಡಲಾಗಿದೆ ಎಂಬ ಆರೋಪ ಸತ್ಯಕ್ಕೆ ದೂರವಾದುದೆಂದು ಸಿಪಿಎಂ ನೇತಾರನಾದ ಉದುಮ ಪಳ್ಳದ ಪಿ.ವಿ. ಭಾಸ್ಕರನ್ ಹಾಗೂ ಕುಟುಂಬ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ತನ್ನ ಮಗಳು ಮನೆಯಲ್ಲಿ ಸುರಕ್ಷಿತವಾಗಿದ್ದಾಳೆ. ಮಾಧ್ಯಮ ಕಾರ್ಯಕರ್ತರು ಮನೆಗೆ ಬಂದು ನೋಡಿ ವಿಷಯ ತಿಳಿದುಕೊಳ್ಳಬಹುದು. ಮಗಳು ಬಹಿರಂಗಗೊಳಿಸಿದ ವೀಡಿಯೋವನ್ನು ಮಾತ್ರ ಆಧಾರವಾಗಿಸಿ ಕೆಲವು ಮಾಧ್ಯಮಗಳು ಹಾಗೂ ಯುಟ್ಯೂಬರ್‌ಗಳು ನಡೆಸುವ ಪ್ರಚಾರ ಸತ್ಯಕ್ಕೆ ದೂರವಾದುದಾಗಿದೆ ಎಂದು ಭಾಸ್ಕರನ್ ತಿಳಿಸಿದ್ದಾರೆ.
2023ರಲ್ಲಿ ಸಂಭವಿಸಿದ ವಾಹನ ಅಪಘಾತದಲ್ಲಿ ಮಗಳ ಬೆನ್ನೆಲುಬಿಗೆ ಏಟು ತಗಲಿ ಸೊಂಟದಿಂದ ಕೆಳಗೆ ಶಕ್ತಿಹೀನಳಾಗಿದ್ದಾಳೆ. ಇದೀಗ ಆಕೆ ಮನೆಯಲ್ಲಿ ಚಿಕಿತ್ಸೆಯಲ್ಲಿದ್ದಾಳೆ. ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಿದ ಬಳಿಕ ಗುಣವಾಗದ ಹಿನ್ನೆಲೆಯಲ್ಲಿ ಮನೆಯಲ್ಲಿ ಆಯುರ್ವೇದ ಚಿಕಿತ್ಸೆ ನೀಡಲು ತಲುಪಿದ ನೀಲೇಶ್ವರದ ರಾಶಿದ್ ಈ ಅಪಪ್ರಚಾರದ ಹಿಂದಿದ್ದಾನೆಂದೂ ಭಾಸ್ಕರನ್ ಕುಟುಂಬ ಆರೋಪಿಸಿದೆ. ಅಸೌಖ್ಯ ಗುಣಪಡಿಸುವು ದಾಗಿಯೂ ಬಳಿಕ ಮದುವೆಯಾಗುವು ದಾಗಿಯೂ ಭರವಸೆಯೊಡ್ಡಿದ ಆತ ಕೋಟ್ಯಂ ತರ ರೂಪಾಯಿಗಳ ವಿಮೆ ಸೌಲಭ್ಯಗಳನ್ನು ಹಾಗೂ ಮಗಳ ಹೆಸರಲ್ಲಿರುವ ಸೊತ್ತನ್ನು ಅಪಹರಿಸಲು ರಾಶಿದ್ ಪ್ರಯತ್ನಿಸಿದ್ದಾನೆಂದು ಭಾಸ್ಕರನ್ ಕುಟುಂಬ ಆರೋಪಿಸಿದೆ. ಮಾದಕ ವಸ್ತುವಿನ ಛಟ ಹೊಂದಿರುವ ಈತ ವಿವಾಹಿತನಾಗಿದ್ದು, ಮಕ್ಕಳೂ ಇದ್ದಾರೆ. ಗೃಹಪೀಡನೆ ವಿರುದ್ಧ ಈತನ ವಿರುದ್ಧ ಪತ್ನಿ ನೀಡಿದ ದೂರಿನಲ್ಲಿ ಚಂದೇರ ಪೊಲೀಸರು ಕೇಸು ದಾಖಲಿಸಿಕೊಂಡಿರುವುದಾಗಿಯೂ ಭಾಸ್ಕರನ್ ತಿಳಿಸಿದ್ದಾರೆ. ಅನ್ಯಧರ್ಮದ ವ್ಯಕ್ತಿಯನ್ನು ಪ್ರೀತಿಸಿದ ಹಿನ್ನೆಲೆಯಲ್ಲಿ ಸಿಪಿಎಂ ಏರಿಯಾ ಕಮಿಟಿ ಸದಸ್ಯ ಮಗಳನ್ನು ಗೃಹ ಬಂಧನದಲ್ಲಿಟ್ಟಿದ್ದಾನೆ ಎಂಬ ಪ್ರಚಾರ ನಡೆಯುತ್ತಿದೆ. ರಾಶಿದ್‌ನ ಸಹಾಯಕನಾದ ತಳಿಪರಂಬ ನಿವಾಸಿ ನೀಡಿದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಈ ಹಿಂದೆ ಹೈಕೋರ್ಟ್ ತಿರಸ್ಕರಿಸಿರುವುದಾಗಿಯೂ ಭಾಸ್ಕರನ್ ತಿಳಿಸಿದ್ದಾರೆ. ರಾಶಿದ್ ನಾಲ್ಕು ತಿಂಗಳ ಚಿಕಿತ್ಸೆಯ ಹೆಸರಲ್ಲಿ ಏಳೂವರೆ ಲಕ್ಷ ರೂಪಾಯಿಯನ್ನು ಅಪಹರಿಸಿದ್ದಾನೆ. ಆದರೆ ತಿಳಿಸಿದ ಕಾಲಾವಧಿ ಕಳೆದರೂ ಮಗಳಲ್ಲಿ ಯಾವುದೇ ಬದಲಾವಣೆ ಉಂಟಾಗಲಿಲ್ಲ. ತನ್ನನ್ನು ನೀನು ಮದುವೆಯಾದರೆ ನೀನು ಎದ್ದು ನಡೆದಾಡುವಂತೆ ಮಾಡುವುದಾಗಿ ಆತ ಮಗಳಲ್ಲಿ ತಿಳಿಸಿದ್ದನು. ಇದರಲ್ಲಿ ನಂಬಿಕೆ ಇರಿಸಿ ರಾಶಿದ್‌ನ ನಿರ್ದೇಶ ಪ್ರಕಾರ ಮಗಳು ಇದೀಗ ಮನೆಯವರನ್ನು ತಿರಸ್ಕರಿಸಿ ಹೇಳಿಕೆ ನೀಡಿದ್ದಾಳೆ. ಮಗಳ ಚಿಕಿತ್ಸೆಗಾಗಿ ಇದುವರೆಗೆ 55 ಲಕ್ಷ ರೂಪಾಯಿ ಖರ್ಚು ತಗಲಿರುವುದಾಗಿಯೂ ಭಾಸ್ಕರನ್ ತಿಳಿಸಿದ್ದಾರೆ. ತಿಂಗಳಿಗೆ 27,000 ರೂ. ನೀಡಿ ಮಗಳ ಶುಶ್ರೂಷೆಗಾಗಿ ಹೋಂನರ್ಸ್‌ನ್ನು ನೇಮಿಸಲಾಗಿದೆ. ಹೀಗಿರುವಾಗ ಮಗಳನ್ನು ಗೃಹ ಬಂಧನದಲ್ಲಿಡಲಾಗಿದೆ ಎಂಬ ಪ್ರಚಾರ ನಡೆಸಿದ ಹಿನ್ನೆಲೆಯಲ್ಲಿ ರಾಶಿದ್ ವಿರುದ್ಧ ಎಸ್‌ಪಿಗೆ ದೂರು ನೀಡಿರುವುದಾಗಿಯೂ ಭಾಸ್ಕರನ್ ತಿಳಿಸಿದ್ದಾರೆ. ತಾನು ಸಿಪಿಎಂ ಏರಿಯಾ ಕಮಿಟಿ ಸದಸ್ಯನಲ್ಲ. 43 ವರ್ಷಗಳ ಕಾಲ ಲೋಕಲ್ ಕಮಿಟಿ ಸದಸ್ಯತ್ವದ ಬಳಿಕ ಈಗ ಬ್ರಾಂಚ್ ಸದಸ್ಯನಾಗಿದ್ದೇನೆ ಎಂದೂ ಭಾಸ್ಕರನ್ ತಿಳಿಸಿದ್ದಾರೆ. ಯುವತಿಯ ತಾಯಿ ಕೆ. ರೋಹಿಣಿ, ಸಹೋದರ ಸುಬಿತ್, ಯುವತಿಯ 13 ವರ್ಷ ಪ್ರಾಯದ ಪುತ್ರನೂ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.