ಕುಂಬಳೆ: ಗೂಂಡಾಗಳಿಗೆ ಹಾಗೂ ಹೊಯ್ಗೆ ಮಾಫಿಯಾಗಳಿಗೆ ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸ್ಥಾನವಿಲ್ಲವೆಂದು ಕುಂಬಳೆಯ ನೂತನ ಪೊಲೀಸ್ ಇನ್‌ಸ್ಪೆಕ್ಟರ್ ಟಿ.ಕೆ.ಮುಕುಂದನ್ ತಿಳಿಸಿದ್ದಾರೆ. ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಯಾವುದೇ ಅನಧಿಕೃತ ಚಟುವಟಿಕೆ ನಡೆಸಲು ಯಾರಿಗೂ ಅವಕಾಶವಿಲ್ಲ. ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಇನ್‌ಸ್ಪೆಕ್ಟರ್ ಅಧಿಕಾರ ಸ್ವೀಕರಿಸಿಕೊಂಡ ಬಳಿಕ ಪತ್ರಕರ್ತರೊಂದಿಗೆ ತಿಳಿಸಿದ್ದಾರೆ. ಹೊಯ್ಗೆ ಸಾಗಾಟ,ಜೂಜಾಟ, ಮಾಫಿಯಾಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.ಶಾಂತಿ-ಸುವ್ಯವಸ್ಥೆಗೆ ಭಂಗ ಸೃಷ್ಟಿಸಿದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳ ಲಾಗುವುದು. ಶಾಂತಿಸುವ್ಯವಸ್ಥೆ ಕಾಪಾಡಿಕೊಳ್ಳಲು ಸಾರ್ವಜನಿಕರ ಸಹಾಯ ಅಗತ್ಯವಿದೆಯೆಂದು ಅವರು ವಿನಂತಿಸಿದ್ದಾರೆ. ದೂರುಗಳಿದ್ದಲ್ಲಿ ಯಾರಿಗೆಬೇಕಾದರೂ ಯಾವುದೇ ಸಮಯದಲ್ಲಿ ಪೊಲೀಸ್ ಠಾಣೆಗೆ ಬೇಟಿ ನೀಡಬಹುದು ಎಂದೂ ಅವರು ತಿಳಿಸಿದ್ದಾರೆ. ಚೆರ್ವತ್ತೂರು ನಿವಾಸಿಯಾದ ಮುಕುಂದನ್ ಚೀಮೇನಿ ಠಾಣೆಯಿಂದ ಇಲ್ಲಿಗೆ ವರ್ಗಾವಣೆ ಗೊಂಡಿದ್ದಾರೆ. ಪಯ್ಯನ್ನೂರು, ಮಾನಂತವಾಡಿ, ಪೇರಾಂಬ್ರ, ಕಾಞಂಗಾಡ್, ಶ್ರೀಕಂಠ ಪುರ ಮೊದಲಾದ ಠಾಣೆಗಳಲ್ಲಿ ಇವರು ಸೇವೆ ಸಲ್ಲಿಸಿದ್ದಾರೆ.
ಕುಂಬಳೆಯಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಆಗಿದ್ದ ಪಿ.ಕೆ. ಜಿಜೀಶ್‌ರನ್ನು ವರ್ಗಾಯಿಸಿ ತೆರವುಗೊಂಡ ಸ್ಥಾನಕ್ಕೆ ಇನ್‌ಸ್ಪೆಕ್ಟರ್ ಮುಕುಂದನ್‌ರನ್ನು ನೇಮಿಸಲಾಗಿದೆ. ಪಿ.ಕೆ.ಜಿಜೀಶ್‌ರ ವರ್ಗಾವಣೆ ಹಿಂದೆ ಮಾಫಿಯಾ ತಂಡಗಳು ಕಾರ್ಯಾಚರಿಸಿವೆ ಎಂಬ ಆರೋಪ ಉಂಟಾಗಿತ್ತು.