ತಿರುವನಂತಪುರ: ಎಡರಂಗದ ಘಟಕ ಪಕ್ಷವಾದ ಸಿಪಿಐಯ ಭಾರೀ ವಿರೋಧದ ನಡುವೆಯೇ ಪಿ.ಎಂ.ಶ್ರೀ (ಪ್ರಧಾನಮಂತ್ರಿ ಸ್ಕೂಲ್ ಫಾರ್ ರೈಸಿಂಗ್ ಇಂಡಿಯ) ಒಪ್ಪಂದ ಪತ್ರಕ್ಕೆ ರಾಜ್ಯ ಸರಕಾರ ಸಹಿ ಹಾಕಿದೆ. ಕೇರಳ ಸಾರ್ವಜನಿಕ ಶಿಕ್ಷಣ ಕಾರ್ಯದರ್ಶಿ ಕೆ. ವಾಸುಕಿಯವರು ದಿಲ್ಲಿಗೆ ತೆರಳಿ ಒಪ್ಪಂದ ಪತ್ರಕ್ಕೆ ವಿದ್ಯುಕ್ತವಾಗಿ ಸಹಿ ಹಾಕಿದ್ದಾರೆ.
ಈ ಯೋಜನೆಗೆ ಸಿಪಿಐ ಆರಂಭದಿಂದಲೇ ವಿರೋಧ ವ್ಯಕ್ತಪಡಿಸುತ್ತಾ ಬಂದಿತ್ತು. ಮಾತ್ರವಲ್ಲ ರಾಜ್ಯ ಸಚಿವ ಸಂಪುಟ ಸಭೆ ಮತ್ತು ಎಡರಂಗ ಸಭೆಯಲ್ಲೂ ಸಿಪಿಐ ಈ ಯೋಜನೆಯನ್ನು ತೀವ್ರವಾಗಿ ವಿರೋಧಿಸಿತ್ತು. ಅದನ್ನು ಕಡೆಗಣಿಸಿ ರಾಜ್ಯ ಸರಕಾರ ಯೋಜನೆಯ ಒಪ್ಪಂದಕ್ಕೆಸಹಿ ಹಾಕಿರುವುದು ಇದೀಗ ಎಡರಂಗದಲ್ಲಿ ಭಾರೀ ಭಿನ್ನಮತಕ್ಕೂ ದಾರಿಮಾಡಿಕೊಟ್ಟಿದೆ. ಸರಕಾರದ ಈ ನಿಲುವಿನಿಂದ ಕುಪಿತಗೊಂಡ ಸಿಪಿಐ ಇಂದು ತುರ್ತಾಗಿ ಸೆಕ್ರೆಟರಿಯೇಟ್ ಸಭೆ ಕರೆದಿದ್ದು, ಅದರಲ್ಲಿ ಈ ವಿಷಯದ ಬಗ್ಗೆ ಚರ್ಚೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಿದೆ.
ಎಡರಂಗದ ಅಂಗೀಕೃತ ನೀತಿಗೆ ವಿರುದ್ಧವಾಗಿ ಸರಕಾರ ಒಪ್ಪಂದಕ್ಕೆ ಸಹಿ ಹಾಕಿದಲ್ಲಿ ಎಡರಂಗ ಸಚಿವ ಸಂಪುಟದಿಂದ ತಮ್ಮ ಸಚಿವರುಗಳನ್ನು ಹಿಂಪಡೆಯಲಾಗುವುದೆಂದು ಸಿಪಿಐ ರಾಜ್ಯ ಕೌನ್ಸಿಲ್ ಸಭೆ ಈಗಾಗಲೇ ವ್ಯಕ್ತಪಡಿಸಿತ್ತು. ಈ ವಿಷಯದಲ್ಲಿ ಇಂದು ನಡೆಯಲಿರುವ ಸೆಕ್ರೆಟರಿಯೇಟ್ ಸಭೆಯಲ್ಲಿ ಸಿಪಿಐ ಅಂತಿಮ ನಿಲುವು ಕೈಗೊಳ್ಳಲಿದೆ. ಪಿಎಂಶ್ರೀ ಯೋಜನೆಯನ್ನು ಜ್ಯಾರಿಗೊಳಿಸುವ ಒಪ್ಪಂದ ಪತ್ರಕ್ಕೆ ಸಹಿ ಹಾಕಿರುವ ಹಿನ್ನೆಲೆಯಲ್ಲಿ ಕೇರಳದ ಶಿಕ್ಷಣ ವಲಯಕ್ಕೆ 1500 ಕೋಟಿ ರೂಪಾಯಿ ಕೇಂದ್ರ ಸರಕಾರದಿಂದ ಲಭಿಸುವ ನಿರೀಕ್ಷೆಯಿದೆ.
ಸ್ಥಳೀಯಾಡಳಿತ ಸಂಸ್ಥೆಗಳಿಗೆ ಶೀಘ್ರದಲ್ಲೇ ಚುನಾವಣೆ ನಡೆಯಲಿರುವಂತೆಯೇ ಪಿಎಂಶ್ರೀ ಯೋಜನೆಯ ಹೆಸರಲ್ಲಿ ಸಿಪಿಐ ಮತ್ತು ಸಿಪಿಎಂ ಮಧ್ಯೆ ಬಿಕ್ಕಟ್ಟು ತಲೆಯೆತ್ತಿರುವುದು ಎಡರಂಗವನ್ನು ತೀವ್ರ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.







