ಕಣ್ಣೂರು: ಊರನ್ನೇ ತಲ್ಲಣಗೊಳಿಸಿದ ದೃಶ್ಯ ಮಾದರಿ ಕೊಲೆಪ್ರಕರಣದಲ್ಲಿ ಜಾಮೀನು ಪಡೆದು ಹೊರ ಬಂದು ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಸಾಹಸಿಕವಾಗಿ ಸೆರೆ ಹಿಡಿದಿದ್ದಾರೆ. ಪರೇಶ್‌ನಾಥ್ ಮಂಡಳಿಯನ್ನು ಇರಿಟ್ಟಿ ಡಿವೈಎಸ್‌ಪಿ ಪಿ.ಕೆ. ಧನಂಜಯ ಬಾಬುರ ನಿರ್ದೇಶದಂತೆ ಇರಿಕ್ಕೂರ್ ಇನ್ಸ್‌ಪೆಕ್ಟರ್ ರಾಜೇಶ್ ಆಯೋಡನ್‌ರ ಮೇಲ್ನೋಟದಲ್ಲಿ ಬಾಂಗ್ಲಾ ದೇಶದ ಗಡಿಯಿಂದ ಎಎಸ್‌ಐ ಸದಾನಂದನ್ ಬಂಧಿಸಿದ್ದಾರೆ. ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ನಿವಾಸಿ ಅಶಿಕುಲ್ ಇಸ್ಲಾಂ (26)ನನ್ನು ಕೊಂದು ಹೂತುಹಾಕಿದ ಪ್ರಕರಣದ ಮುಖ್ಯ ಆರೋಪಿಯಾಗಿದ್ದಾನೆ ಪರೇಶ್‌ನಾಥ್ ಮಂಡಲ್. 2021 ಜೂನ್ 28ರಂದು ಅಶಿಕುಲ್ ನಾಪತ್ತೆಯಾಗಿದ್ದನು. ಈತ ಇರಿಕ್ಕೂರು ಪೆರುವಳತ್ ಪರಂಬಿಲ್‌ನಲ್ಲಿ ವಾಸಿಸುತ್ತಿದ್ದ ಸಾರಣೆ ಕಾರ್ಮಿಕನಾಗಿದ್ದನು. ಅಶಿಕುಲ್ ನಾಪತ್ತೆಯಾದ ಬೆನ್ನಲ್ಲೇ ಜೊತೆಗೆ ಕೆಲಸ ಮಾಡುತ್ತಿದ್ದ ಪರೇಶ್‌ನಾಥ್ ಮಂಡಲ್ ಹಾಗೂ ಗಣೇಶ್ ಮಂಡಲ್ ನಾಪತ್ತೆಯಾಗಿದ್ದರು. ಅಶಿಕುಲ್‌ನ ಸಹೋದರ ಮೋಮಿನ್ ಇರಿಕ್ಕೂರ್ ಪೊಲೀಸರಿಗೆ ನೀಡಿದ ದೂರಿನಂತೆ ಕೇಸು ದಾಖಲಿಸಿ ತನಿಖೆ ನಡೆಸಲಾಯಿತಾದರೂ ಯಾವುದೇ ಸೂಚನೆ ಲಭಿಸಿರಲಿಲ್ಲ. ಬಳಿಕ ಅಂದಿನ ಇರಿಟ್ಟಿ ಡಿವೈಎಸ್‌ಪಿಯಾಗಿದ್ದ ಪ್ರಿನ್ಸ್ ಎಬ್ರಹಾಂರ ಮೇಲ್ನೋಟದಲ್ಲಿ ಪ್ರತ್ಯೇಕ ತನಿಖಾ ತಂಡ ರೂಪೀಕರಿಸಿ ತನಿಖೆ ಮುಂದುವರಿಸಲಾಗಿತ್ತು. ಪೆರುವಳತ್ ಪರಂಬ್ ಕೂಟಾವ್ ಜಂಕ್ಷನ್‌ನಲ್ಲಿ ನಿರ್ಮಾಣ ಹಂತದಲ್ಲಿದ್ದ ಮನೆಯ ಬಾತ್ರೂಮ್‌ನಲ್ಲಿ ಹೊಂಡ ತೋಡಿ ಅದರಲ್ಲೇ ಮೃತದೇಹವನ್ನು ಹಾಕಿ ಮೇಲೆ ಕಾಂಕ್ರೀಟ್ ನಡೆಸಿದ ಸ್ಥಿತಿಯಲ್ಲಿ ಮೃತದೇಹವನ್ನು ಪತ್ತೆಹಚ್ಚಲಾಗಿತ್ತು. ಬಳಿಕ ಪರೇಶ್ ಮಂಡಲ್ ಹಾಗೂ ಗಣೇಶ್ ಮಂಡಲ್‌ರನ್ನು ಬಂ ಧಿಸಲಾಗಿತ್ತು. ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಬಂದ ಬಳಿಕ ಪರೇಶ್ ಮಂಡಲ್ ಪರಾರಿಯಾಗಿದ್ದನು. ಈತನನ್ನು ಪತ್ತೆಹಚ್ಚಲು ನಿರಂತರ ಯತ್ನ ನಡೆಸಲಾಯಿತಾದರೂ ಫಲ ಲಭಿಸಿರಲಿಲ್ಲ. ಈ ಮಧ್ಯೆ ಆರೋಪಿಯ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ರಹಸ್ಯ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಎಎಸ್‌ಐ ಸದಾನಂದನ್ ನೇತೃತ್ವದ ತಂಡ ಬಾಂಗ್ಲಾದೇಶದ ಗಡಿಗೆ ತೆರಳಿ ಗುರುವಾರ ರಾತ್ರಿ ವೇಳೆ ಸಾಹಸಿಕವಾಗಿ ಸೆರೆ ಹಿಡಿದಿದೆ.







