ಕುಂಬಳೆ: ಅನಂತಪುರ ಉದ್ದಿಮೆ ಕೇಂದ್ರದಲ್ಲಿರುವ ಫ್ಲೈವುಡ್ ಫ್ಯಾಕ್ಟರಿ ಯಲ್ಲಿ ನಿನ್ನೆ ಸಂಜೆ ಸಂಭವಿಸಿದ ಭಯಾನಕ ಸ್ಫೋಟದ ಕುರಿತು ಬಾಂಬ್ ಸ್ಕ್ವಾಡ್ ಹಾಗೂ ಆರೋಗ್ಯ ಇಲಾಖೆ ತಂಡ ತಲುಪಿ ಪರಿಶೀಲನೆ ಆರಂಭಿಸಿದೆ. ನಿನ್ನೆ ಸಂಜೆ ೬.೩೦ರ ವೇಳೆ ಸಂಭವಿಸಿದ ಭಾರೀ ಸ್ಫೋಟದಲ್ಲಿ ಓರ್ವ ಕಾರ್ಮಿಕ ಮೃತಪಟ್ಟು ೨೦ ಮಂದಿ ಗಾಯಗೊಂಡಿ ದ್ದಾರೆ. ಗಾಯಾಳುಗಳಲ್ಲಿ ಐದು ಮಂದಿಯ ಸ್ಥಿತಿ ಅತೀ ಗಂಭೀರವಾ ಗಿದೆಯೆಂದು ತಿಳಿದುಬಂದಿದೆ. ಗಾಯಾಳುಗಳನ್ನು ಕಾಸರಗೋಡು, ಕುಂಬಳೆ, ಮಂಗಳೂರಿನ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ. ಘಟನೆ ಸ್ಥಳದಲ್ಲಿ ಪೊಲೀಸ್ ಕಾವಲು ಏರ್ಪಡಿ ಸಲಾಗಿದೆ.
ಅನಂತಪುರ ಉದ್ದಿಮೆ ಕೇಂದ್ರದಲ್ಲಿ ರುವ ಡೆಕ್ಕರ್ ಪಾನಲ್ ಇಂಡಸ್ಟ್ರೀಸ್ ಪ್ಲೈವುಡ್ ಫ್ಯಾಕ್ಟರಿಯ ಬಾಯ್ಲರ್ ಸ್ಫೋಟಗೊಂಡು ಈ ದುರಂತ ಸಂಭವಿಸಿದೆ.
ಅಸ್ಸಾಂ ರಾಜ್ಯದ ಉದಲ್‌ಗುರಿ ಜಿಲ್ಲೆಯ ಬಿಸ್ಕುತಿ ಚೆಂಗೋಳಿ ಮಾರ ಎಂಬಲ್ಲಿನ ನಜೀರುಲ್ ಅಲಿ (21) ಈ ದುರಂತದಲ್ಲಿ ಸಾವನ್ನಪ್ಪಿದ ದುರ್ದೈವಿಯಾಗಿದ್ದಾರೆ. ದುರ್ಘಟನೆ ಸಂಭವಿಸಿದ ತಕ್ಷಣ ಇವರು ಮೃತಪಟ್ಟಿದ್ದಾರೆಂದು ಹೇಳಲಾಗುತ್ತಿದೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ತಲುಪಿಸಲಾಗಿದೆ. ಘಟನೆಗೆ ಸಂಬಂಧಿಸಿ ಸಮಗ್ರ ತನಿಖೆ ಪೂರ್ತಿಗೊಳಿಸಿದ ಬಳಿಕ ಅಗತ್ಯದ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಕೆ. ಇಂಭಶೇಖರ್ ತಿಳಿಸಿದ್ದಾರೆ. ಘಟನೆ ಕುರಿತು ಫ್ಯಾಕ್ಟರೀಸ್ ಆಂಡ್ ಬಾಯ್ಲರ್ಸ್ ಇಲಾಖೆಯ ಕೆಮ್ರೆಕ್ ಎರ್ನಾಕುಳಂ ವಿಭಾಗ ತನಿಖೆ ನಡೆಸಲಿದೆಯೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ನಿನ್ನೆ ಸಂಜೆ ಸ್ಫೋಟ ಸಂಭವಿಸುವ ವೇಳೆ ೧೨ ಮಂದಿ ಶಿಫ್ಟ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಫ್ಯಾಕ್ಟರಿಯಲ್ಲ್ಲಿ ೫೦ರಷ್ಟು ಮಂದಿ ಇದ್ದರೆಂದು ಹೇಳಲಾಗುತ್ತಿದೆ.
ಫ್ಯಾಕ್ಟರಿಯಲ್ಲಿ ಎರಡು ಬಾಯ್ಲರ್‌ಗಳ ಪೈಕಿ ಒಂದು ಸ್ಫೋಟಗೊಂಡಿದೆ. ತಕ್ಷಣ ಬೆಂಕಿ ಹತ್ತಿಕೊಂಡಿತ್ತಲ್ಲದೆ ಕಟ್ಟಡದ ಮೇಲ್ಚಾವಣಿ ನಾಶಗೊಂಡಿದೆ. ಕಾಸರಗೋಡು, ಉಪ್ಪಳ, ಕಾಞಂಗಾಡ್, ತೃಕರಿಪುರ ಎಂಬಿಡೆಗಳಿಂದ ಅಗ್ನಿಶಾಮಕದಳಗಳು ತಲುಪಿ ಬೆಂಕಿ ನಂದಿಸಿವ. ಕಾಸರಗೋಡು ಎಎಸ್ಪಿ ಡಾ.ಎ. ನಂದಗೋಪನ್ ನೇತೃತ್ವದಲ್ಲಿ ಪೊಲೀಸ್ ತಂಡವೂ ಸ್ಥಳಕ್ಕೆ ತಲುಪಿತ್ತು ರಕ್ಷಣಾ ಕಾರ್ಯಕ್ಕೆ ನೇತೃತ್ವ ನೀಡಿತು. ಅಗ್ನಿಶಾಮಕದಳ, ಪೊಲೀಸ್ ಹಾಗೂ ನಾಗರಿಕರು ಸೇರಿ ಗಾಯಾಳುಗಳನ್ನು ಆಸ್ಪತ್ರೆಗೆ ತಲುಪಿಸಿದರು. ಫ್ಯಾಕ್ಟರಿಯಲ್ಲಿ ಸ್ಫೋಟ ಸಂಭವಿಸಲು ಯತಾರ್ಥ ಕಾರಣವೇನೆಂದು ಇನ್ನಷ್ಟೇ ತನಿಖೆ ಯಲ್ಲಿ ತಿಳಿಯಬೇಕಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ಸ್ಫೋಟ ಸದ್ದಿನಿಂದ ಬೆಚ್ಚಿಬಿದ್ದ ನಾಡು
ಕುಂಬಳೆ: ಅನಂತಪುರ ಪ್ಲೈವುಡ್ ಫ್ಯಾಕ್ಟರಿಯಲ್ಲಿ ಸಂಭವಿಸಿದ ಬಾಯ್ಲರ್ ಸ್ಫೋಟದಿಂದ ಇಡೀ ನಾಡು ಬೆಚ್ಚಿಬಿದ್ದಿದೆ.
ಸ್ಫೋಟದಿಂದ ಸಮೀಪ ಪ್ರದೇಶಗಳಲ್ಲಿರುವ ಹಲವು ಮನೆಗಳ ಕಿಟಿಕಿ ಗಾಜುಗಳು ಪುಡಿಗೈಯ್ಯಲ್ಪಟ್ಟಿವೆ. ಘಟನೆ ಸ್ಥಳದಿಂದ ಸುಮಾರು ೨೦ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಕಂಪನದ ಅನುಭವ ಉಂಟಾಯಿ ತೆಂದು ನಾಗರಿಕರು ತಿಳಿಸುತ್ತಿದ್ದಾರೆ. ಭೂಕಂಪನ ಉಂಟಾಯಿತೇ ಎಂಬ ಸಂಶಯ ಕೆಲವರನ್ನು ಕಾಡಿದ್ದು, ಇದರಿಂದ ಮನೆಗಳಿಂದ ಹೊರಗೆ ಓಡಿದ್ದಾರೆ. ಸಮೀಪ ಪ್ರದೇಶಗಳಲ್ಲಿ ಉಗ್ರ ಶಬ್ದ ಕೇಳಿಬಂದುದರಿಂದ ಮಕ್ಕಳು ಬೊಬ್ಬಿಟ್ಟಿದ್ದಾರೆ.
ಫ್ಲೈವುಟ್ ಫ್ಯಾಕ್ಟರಿಯಲ್ಲಿ ಸ್ಫೋಟ ಸಂಭವಿಸಿದೆಯೆಂದು ತಿಳಿದಾಕ್ಷಣ ನೂರಾರು ಮಂದಿ ಅಲ್ಲಿಗೆ ಓಡಿ ತುಪಿದ್ದಾರೆ. ಫ್ಯಾಕ್ಟರಿಯ ಸಮೀಪಕ್ಕೆ ಹೋಗಲು ಪೊಲೀಸರನ್ನೂ ಬಿಡಲಿಲ್ಲ. ವಿವಿಧೆಡೆಗಳಿಂದ ತಲುಪಿದ ಅಗ್ನಿಶಾಮಕದಳಗಳು ಬೆಂಕಿ ನಂದಿಸಿವೆ. ಅನಂತರ ಜೆಸಿಬಿ ಬಳಸಿ ಫ್ಯಾಕ್ಟರಿಯೊಳಗಿರುವ ಮರಗಳ ಸಹಿತ ಸಾಮಗ್ರಿಗಳನ್ನು ತೆರವುಗೊಳಿಸಿ ಅಲ್ಲಿ ಯಾರೂ ಸಿಲುಕಿಕೊಂಡಿಲ್ಲವೆಂದು ಖಚಿತಪಡಿಸಿದರು.







