ಯುವತಿಯನ್ನು ಬಸ್‌ನಿಂದ ಇಳಿಸಿ ಅಪಹರಿಸಿ ಕುತ್ತಿಗೆ, ಹೊಟ್ಟೆಗೆ ಚಾಕು ಇರಿಸಿ ಬೆದರಿಕೆ: ಯೋಧನ ವಿರುದ್ಧ ಕೇಸು

ಕಾಸರಗೋಡು: ಯುವತಿಯನ್ನು ಬಸ್‌ನಿಂದ ಒತ್ತಾಯಿಸಿ ಇಳಿಸಿ ಸ್ಕೂಟರ್‌ನಲ್ಲಿ ಅಪಹರಿಸಿಕೊಂಡೊಯ್ದು ಕ್ವಾರೆಗೆ ಸಮೀಪ ತಲುಪಿಸಿ ಕುತ್ತಿಗೆ ಹಾಗೂ ಹೊಟ್ಟೆಗೆ ಚಾಕು ಇರಿಸಿ ಬೆದರಿಕೆಯೊಡ್ಡಿರುವುದಾಗಿ ದೂರಲಾಗಿದೆ. ಘಟನೆಗೆ ಸಂಬಂಧಿಸಿ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಘಟನೆ ನಡೆದಿರುವುದು ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಾದುದರಿಂದ ಪ್ರಕರಣವನ್ನು ಅಲ್ಲಿಗೆ ಸ್ಥಳಾಂತರಿಸುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ವೆಳ್ಳರಿಕುಂಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ 29ರ ಹರೆಯದ ಯುವತಿಯ ದೂರಿನ ಪ್ರಕಾರ ಕೊಡಕ್ಕಾಡ್ ನಿವಾಸಿ ಹಾಗೂ ಯೋಧನಾದ ಅನೀಶ್ ಕುಮಾರ್  ಎಂಬಾತನ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ನಿನ್ನೆ ಸಂಜೆ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ.  ಕಾಞಂಗಾಡ್ ಭಾಗಕ್ಕೆ ತೆರಳುತ್ತಿದ್ದ ಬಸ್‌ನಲ್ಲಿ ಯುವತಿ ಪ್ರಯಾಣಿಸುತ್ತಿದ್ದಳು. ಬಸ್ ಚಟ್ಟಂಚಾಲ್ ಸಮೀಪ ತಲುಪಿದಾಗ ಯುವತಿಯನ್ನು ಒತ್ತಾಯಿಸಿ ಬಸ್‌ನಿಂದ ಇಳಿಸಿ ಸ್ಕೂಟರ್‌ನಲ್ಲಿ ಪೊಯಿನಾಚಿಯ ಒಂದು ಕ್ವಾರೆ ಸಮೀಪ ನಿರ್ಜನ ಪ್ರದೇಶಕ್ಕೆ ತಲುಪಿಸಿ ಕುತ್ತಿಗೆ ಹಾಗೂ ಹೊಟ್ಟೆಗೆ ಚಾಕು ಇರಿಸಿ ಕೊಲೆ ಗೈಯ್ಯುವುದಾಗಿ ಬೆದರಿಕೆಯೊಡ್ಡಿರುವುದಾಗಿ ದೂರಲಾಗಿದೆ. ಈ ವೇಳೆ ಸ್ಥಳದಿಂದ ಪರಾರಿಯಾದ  ಬಳಿಕ ಯುವತಿ ರಕ್ಷಕರಲ್ಲಿ ವಿಷಯ ತಿಳಿಸಿದ ಬಳಿಕ  ಹೊಸದುರ್ಗ ಪೊಲೀಸರಿಗೆ ದೂರು ನೀಡಿದ್ದಾಳೆ. ಯುವತಿಯನ್ನು ಆರೋಪಿ ಇನ್‌ಸ್ಟಾಗ್ರಾಮ್ ಮೂಲಕ ನಿರಂತರ ಕಿರುಕುಳ ನೀಡುತ್ತಿದ್ದುದಾಗಿ ದೂರಲಾಗಿದೆ. ಈ ಕುರಿತಾಗಿಯೂ ಪೊಲೀಸರು ತನಿಖೆ ಆರಂಭಿಸಿದ್ದಾರೆ.

You cannot copy contents of this page