ಉಪ್ಪಳ: ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಚಿಪ್ಪಾರುಪದವು-ಬಾಯಾರು ಸೊಸೈಟಿ, ಸರ್ಕುತ್ತಿ, ಸಜಂಕಿಲ, ಪೊಸಡಿಗುಂಪೆ ದಾರಿ ಯಾಗಿ ಪೆರ್ಮುದೆ ಸಂಗಮಿಸುವ ಲೋಕೋಪಯೋಗಿ ಇಲಾಖೆ ರಸ್ತೆಯಲ್ಲಿ ದುರಸ್ತಿ ಕಾಮಗಾರಿ ಅರ್ಧದಲ್ಲೇ ಮೊಟಕು ಗೊಳಿಸಿದ ಹಿನ್ನೆಲೆಂiiಲ್ಲಿ ಬಸ್ ಸಹಿತ ವಾಹನ ಸಂಚಾರ ಕಷ್ಟಕರವಾಗಿದ್ದು, ಸಾರ್ವಜನಿಕರು ಸಂಕಷ್ಟಗೊಂಡಿದ್ದಾರೆ. ರಸ್ತೆ ದುರಸ್ತಿ ಶೀಘ್ರ ಮುಂದುವರಿಸದಿದ್ದಲ್ಲಿ ಬಿಜೆಪಿ ಪೈವಳಿಕೆ ಪಂಚಾಯತ್ ಸಮಿತಿ ಹೋರಾಟಕ್ಕೆ ಮುಂದಾಗುವುದಾಗಿ ತಿಳಿಸಿದೆ. ನಾಲ್ಕು ತಿಂಗಳ ಹಿಂದೆ ಈ ರಸ್ತೆಯನ್ನು ಅಗಲ ಹಾಗೂ ಮರು ಡಾಮರೀಕರಗೊಳಿಸಲು ಚಾಲನೆ ನೀಡಲಾಗಿತ್ತು. ಆದರೆ ಮಳೆಯಿಂದಾಗಿ ಕಾಮಗಾರಿ ಮೊಟಕು ಗೊಂಡಿತ್ತೆನ್ನಲಾಗಿದೆ.
ಈ ರಸ್ತೆಯ ಕೆಲವೆಡೆ ಒಂದು ಕೋಟಿಂಗ್ ಡಾಮರೀಕರಣ ನಡೆಸಲಾಗಿದೆ. ಇನ್ನು ಕೆಲವೆಡೆ ಜಲ್ಲಿಕಲ್ಲು ಮಾತ್ರವೇ ಹಾಕಲಾಗಿದೆ. ಕಾಮಗಾರಿ ಪೂರ್ತಿಗೊಳಿಸ ದಿರುವುದರಿಂದ ಜಲ್ಲಿಕಲ್ಲುಗಳ ಮೇಲೆ ವಾಹನ ಸಂಚಾರ ನಡೆಸಬೇಕಾಗುತ್ತಿದೆ. ಅಲ್ಲದೆ ದ್ವಿಚಕ್ರ ವಾಹಗಳು ಅಪಘಾತಕ್ಕೆ ಕಾರಣವಾಗುತ್ತಿರುವುದಾಗಿ ಊರವರು ಆರೋಪಿಸಿದ್ದಾರೆ.
ಬಾಯಾರು ಸೊಸೈಟಿಯಲ್ಲಿ ಆರೋಗ್ಯ ಕೇಂದ್ರ, ಕ್ಯಾಂಪ್ಕೋ, ಬ್ಯಾಂಕ್, ಸರಕಾರಿ ಕಚೇರಿಗಳಿವೆ. ಚಿಪ್ಪಾರುಪದವು ಹಾಗೂ ಕರ್ನಾಟಕ ಸಹಿತ ಇತರ ಕಡೆಗೆ ಶಾಲಾ ಕಾಲೇಜುಗಳಿಗೆ ಮಕ್ಕಳ ಸಹಿತ ನೂರಾರು ಮಂದಿ ಸಂಚರಿಸುವ ರಸ್ತೆ ಇದಾಗಿದೆ. ಕಾಮಗಾರಿ ಮೊಟಕುಗೊಳಿಸಿದ ಗುತ್ತಿಗೆದಾರನ ನಿರ್ಲಕ್ಷ್ಯದಿಂದ ಸಾರ್ವಜನಿಕರು ಸಂಕಷ್ಟ ಅನುಭವಿಸುವಂತಾಗಿದೆ. ಇಲಾಖೆ ಅಧಿಕಾರಿಗಳು ಕೂಡಲೇ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟ ನಡೆಸುವುದಾಗಿ ಬಿಜೆಪಿ ನೇತಾರ ಸುಬ್ರಹ್ಮಣ್ಯ ಭಟ್ ಆಟಿಕುಕ್ಕೆ ತಿಳಿಸಿದ್ದಾರೆ.






