ತಿಂಗಳ ಮಗು ಮಾರಾಟ: ನೀರ್ಚಾಲ್‌ನಲ್ಲಿ ಪತ್ತೆ; ತಾಯಿ ಪೊಲೀಸ್ ಕಸ್ಟಡಿಯಲ್ಲಿ

ಕುಂಬಳೆ: ಒಂದು ತಿಂಗಳು ಪ್ರಾಯದ ಗಂಡು ಮಗುವನ್ನು ತಾಯಿ ಬೇರೊಬ್ಬ ಮಹಿಳೆಗೆ ಮಾರಾಟಗೈದ ಪ್ರಕರಣ ಕುಂಬಳೆಯಲ್ಲಿ ನಡೆದಿದೆ. ಪೊಲೀಸರ ಸಹಾಯದೊಂದಿಗೆ ಶಿಶುಕ್ಷೇಮ ಸಮಿತಿ ನಡೆಸಿದ ತನಿಖೆಯಲ್ಲಿ ಮಗುವನ್ನು ನೀರ್ಚಾಲ್ ವಿಲ್ಲೇಜ್‌ನ ಮನೆಯೊಂದರಲ್ಲಿ ಪತ್ತೆಹಚ್ಚಲಾಗಿದೆ. ಈ ಸಂಬಂಧ ಮಗು ಹಾಗೂ ತಾಯಿಯನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಯುವತಿಯನ್ನು ಸಿಡಬ್ಲ್ಯುಸಿಗೆ ಹಸ್ತಾಂತರಿಸಲಾಗಿದ್ದು, ಮಗುವನ್ನು ಚೈಲ್ಡ್ ಹೋಮ್‌ಗೆ ಕಳುಹಿಸಿ ಕೊಡಲಾಗಿದೆ.

ಮಗುವನ್ನು ಮಾರಾಟಗೈದ ಪ್ರಕರಣಕ್ಕೆ ಸಂಬಂಧಿಸಿ ಅಧಿಕಾರಿಗಳು ಈ ರೀತಿ ತಿಳಿಸುತ್ತಿದ್ದಾರೆ- ಕುಂಬಳೆ ಪೇಟೆ ಸಮೀಪ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಯುವತಿ ಒಂದು ತಿಂಗಳ ಹಿಂದೆ ಮಗುವಿಗೆ ಜನ್ಮ ನೀಡಿದ್ದಾಳೆ. ಯುವತಿಯ ಮೊದಲ ಪತಿ ಮೃತಪಟ್ಟಿದ್ದಾನೆ. ಈ ಸಂಬಂಧದಲ್ಲಿ ಮಕ್ಕಳಿದ್ದಾರೆ. ಅನಂತರ ಪತ್ನಿ ಹಾಗೂ ಮಕ್ಕಳು ಇರುವ ಮಂಗಳೂರಿನ ಹೋಟೆಲ್ ನೌಕರನಾದ ಓರ್ವ ಯುವಕನೊಂದಿಗೆ ಯುವತಿಯ ಮದುವೆ ನಡೆಯಿತು. ಯುವತಿಗೆ ಮೊದಲ ಪತಿಯಿಂದ ಜನಿಸಿದ ಇಬ್ಬರು ಮಕ್ಕಳು ಕೂಡಾ ಅವರ ಜತೆಗಿದ್ದರು. ಎರಡನೇ ಪತಿಯಿಂದ ಯುವತಿ ಗರ್ಭಿಣಿಯಾಗಿದ್ದು, ಒಂದು ತಿಂಗಳ ಹಿಂದೆ ಮಗುವಿಗೆ ಜನ್ಮ ನೀಡಿದ್ದಳು. ಈ ಮಗುವನ್ನು ಮಕ್ಕಳಿಲ್ಲದ ಓರ್ವ ಮಹಿಳೆಗೆ ನೀಡಲಾಗಿತ್ತು. ಈ ವಿಷಯ ಯಾರಿಗೂ ತಿಳಿದಿರಲಿಲ್ಲ. ಹೆರಿಗೆಗಾಗಿ ಮಂಗಳೂರಿನ ಆಸ್ಪತ್ರೆಗೆ ತೆರಳಿದ ಯುವತಿ ಬಳಿಕ ಮನೆಗೆ ಮರಳಿದ್ದು, ಈ ವೇಳೆ ಆಕೆ ಜತೆ ಮಗು ಇಲ್ಲದಿ ರುವುದನ್ನು ಸ್ಥಳೀಯರು  ವಿಚಾರಿಸಿದ್ದರು. ಈ ವೇಳೆ ಮಗು ಹಳದಿ ಕಾಮಾಲೆ ಬಾಧಿಸಿ ಸಾವಿಗೀಡಾಗಿರುವುದಾಗಿ ಯುವತಿ ಹೇಳಿಕೆ ನೀಡಿದ್ದಳು. ಈ ವಿಷಯ ಪರಿಸರ ಪ್ರದೇಶಗಳಲ್ಲಿ ಚರ್ಚೆಯಾಗುವುದರೊಂದಿಗೆ ಆರೋಗ್ಯ ಅಧಿಕಾರಿಗಳ ಗಮನಕ್ಕೆ ಬಂದಿದೆ.

ಆರೋಗ್ಯ ಕಾರ್ಯಕರ್ತರು ಯುವತಿಯ ಮನೆಗೆ ತಲುಪಿ ಮಗುವನ್ನು ಕಾಣಬೇಕೆಂದು ತಿಳಿಸಿದರು. ಆದರೆ ಯುವತಿಯ ಹೇಳಿಕೆಯಲ್ಲಿ ಸಂಶಯ ಕಂಡುಬಂದ ಹಿನ್ನೆಲೆಯಲ್ಲಿ ಮತ್ತಷ್ಟು ತನಿಖೆಗೊಳಪಡಿಸಿದಾಗ ಮಗುವನ್ನು ಮಾರಾಟಗೈದ ವಿಷಯ ತಿಳಿದು ಬಂದಿದೆ. ಕೂಡಲೇ ಅವರು ಘಟನೆಯನ್ನು ಶಿಶುಕ್ಷೇಮ ಸಮಿತಿ ಹಾಗೂ ಪೊಲೀಸರಿಗೆ ತಿಳಿಸಿದ್ದಾರೆ. ಅನಂತರ ನಡೆಸಿದ ತನಿಖೆಯಲ್ಲಿ ಮಗುವನ್ನು ನೀರ್ಚಾಲ್‌ನ  ಮಹಿಳೆಯೋರ್ವೆಯ ಮನೆಯಲ್ಲಿ  ಪತ್ತೆಹಚ್ಚಲಾಗಿದೆ. ಇದೇ ಸಂದರ್ಭದಲ್ಲಿ ಮಗುವನ್ನು ಹಣ ಕೊಟ್ಟು ಪಡೆದಿರುವುದಲ್ಲವೆಂದೂ ಸಾಕಲು ಪಡೆದುಕೊಂಡಿರುವುದಾಗಿ ಮಗುವನ್ನು ಪತ್ತೆಹಚ್ಚಲಾದ ಮನೆಯ ಮಹಿಳೆ ಅಧಿಕಾರಿಗಳಲ್ಲಿ ತಿಳಿಸಿದ್ದಾಳೆ. ಮಗುವನ್ನು ಮರಳಿ ನೀಡದಿದ್ದಲ್ಲಿ ಆತ್ಮಹತ್ಯೆಗೈಯ್ಯುವುದಾಗಿಯೂ ಆಕೆ ಬೆದರಿಕೆಯೊಡ್ಡಿರುವುದಾಗಿ ಹೇಳಲಾಗುತ್ತಿದೆ.  ಮಗುವನ್ನು ಸಂರಕ್ಷಿಸಲು ಕಾನೂನು ರೀತಿಯ ಕ್ರಮಗಳಿವೆಯೆಂದು ಅದನ್ನು ನಡೆಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆಂದು ತಿಳಿಸಲಾಗಿದೆ.

RELATED NEWS

You cannot copy contents of this page