ರಾಜ್ಯೋತ್ಸವ ವಿಶೇಷ: ತಮಿಳು ಕ್ಷೌರಿಕನ ಕನ್ನಡಪ್ರೇಮ

ಕಾಸರಗೋಡು: ವ್ಯವಹಾರ ಸಂಸ್ಥೆಗಳ ನಾಮಫಲಕಗಳು ಆಂಗ್ಲ ಭಾಷೆಯಲ್ಲಿ ಮಾತ್ರ ವಿಜ್ರಂಭಿಸುತ್ತಿರುವ ಕಾಲಘಟ್ಟದಲ್ಲಿ ಹೊರ ರಾಜ್ಯದಿಂದ ಇಲ್ಲಿಗೆ ಬಂದ ಅನ್ಯಭಾಷಾ ಪ್ರೇಮಿಯೊಬ್ಬರ ಭಾಷಾ ಸಾಮರಸ್ಯವು ರಾಜ್ಯೋತ್ಸವ ಸಂದರ್ಭದಲ್ಲಿ ಕನ್ನಡಿಗರಿಗೆ ಹಿತಾನುಭವ ಮೂಡಿಸುತ್ತಿದೆ.

ತಮಿಳುನಾಡಿನ ತಂಜಾವೂರು ತಿರುಚ್ಚಿಯ ಇಳಂಗೋವನ್ ಎಂಬವರು ನಗರದ ಚಂದ್ರಗಿರಿ ಜಂಕ್ಷನ್ ಎಂ.ಜಿ ರಸ್ತೆಯ ಪೆಟ್ರೋಲ್ ಬಂಕ್ ಮತ್ತು ಜೀವ ವಿಮಾ ನಿಗಮದ ಕಚೇರಿ ನಡುವೆ ಇರುವ ಕಟ್ಟಡದಲ್ಲಿ ಆರಂಭಿಸಿರುವ ತಮ್ಮ ಸೆಲೂನ್‌ಗೆ ‘ಕ್ಷೌರದಂಗಡಿ’ ಎಂದು ಅಚ್ಚ ಕನ್ನಡ ಭಾಷೆಯಲ್ಲಿ ನಾಮಫಲಕ ಹಾಕಿರು ವುದು ಕನ್ನಡ ಭಾಷಾ ಪ್ರೇಮಿಗಳನ್ನು ಸೆಳೆಯುತ್ತಿದೆ. ಕಾಸರಗೋಡು ಜಿಲ್ಲೆಯಲ್ಲಿ ಸಂಸ್ಥೆಯ ನಾಮಫಲ ಕಗಳು ಕನ್ನಡದಲ್ಲಿ ಗೋಚರಿಸುತ್ತಿದ್ದರೂ ಕನ್ನಡ ಶಬ್ದಗಳಲ್ಲಿ ಸಂಸ್ಥೆಯ ಹೆಸರು ಕಾಣುವುದು ಅಪೂರ್ವವಾಗಿದೆ. ಕ್ಷೌರದಂಗಡಿ ಎಂದು ಫಲಕ ಸ್ಥಾಪಿಸಿರುವುದರಿಂದ ಇಂದಿನ ಕನ್ನಡ ಮಕ್ಕಳಿಗೆ ಸೆಲೂನ್(ಬಾರ್ಬರ್ ಶಾಪ್)ನ ಮೂಲ ಕನ್ನಡ ಪದ  ತಿಳಿಯುವಂತಾಗಿದೆ.  ಇದು ಇಳಂ ಗೋವನ್ ಅವರ ಕನ್ನಡ ಉಳಿವಿಗಾಗಿ  ನಡೆಸುವ ಪರೋಕ್ಷ ಸೇವೆ ಎಂಬುವುದನ್ನು ಅಲ್ಲಗಳೆಯುವಂತಿಲ್ಲ.

1954 ರಲ್ಲಿ ಬದುಕಿನ ಬುತ್ತಿಗಾಗಿ ತನ್ನ ತಂದೆಯೊಂದಿಗೆ ಕಾಸರಗೋಡಿಗೆ ಕಾಲಿಟ್ಟ ಇಳಂಗೋವನ್ ಆರಂಭದಲ್ಲಿ  ಕೂಲಿನಾಲಿ ಮಾಡಿಕೊಂಡು ಜೀವನ ಸಾಗಿಸಿದ್ದರು. ಬಳಿಕ ತಂದೆಯೊಂದಿಗೆ  ಕ್ಷೌರಿಕ ವೃತ್ತಿಗೆ ತೊಡಗಿ ಬಳಿಕ ಸ್ವಂತ ಅಂಗಡಿ ಆರಂಭಿಸಿದ್ದರು.  ಬ್ಯಾಂಕ್ ರಸ್ತೆಯಲ್ಲಿ ಸ್ಥಾಪಿಸಿದ್ದ ಮೊದಲ ಅಂಗಡಿಗೆ ಕನ್ನಡಿಗರೇ ಹೆಚ್ಚಾಗಿ ಬರುತ್ತಿದ್ದರು. ಅದೇ ವಿಶ್ವಾಸದಲ್ಲಿ ಈಗಲೂ ಹೆಚ್ಚಿನ ಕನ್ನಡಿಗರು ಬರುತ್ತಿರುವುದರಿಂದ ಕನ್ನಡದ ನಾಮಫಲಕ  ಬರೆಸಿದ್ದೇನೆ ಎಂದು ಇವರು ತಿಳಿಸುತ್ತಿದ್ದಾರೆ. ಇದಕ್ಕೆ ತಮ್ಮ ಮನೆ ಸಮೀಪದ ದಿನೇಶ್ ಆರ್ಟಿಸ್ಟ್ ಪಳ್ಳಿಪುರ ಸಹಕಾರ ನೀಡಿದ್ದಾರೆ ಎಂದಿದ್ದಾರೆ.

RELATED NEWS

You cannot copy contents of this page