ಉಪ್ಪಳ: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಉಪ್ಪಳ ರೈಲ್ವೇ ಗೇಟ್ ಸಮೀಪ ಯುವಕನೋರ್ವ ನಿಗೂಢವಾಗಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಮಂಗಳೂರಿನಿಂದ ಕಾಸರಗೋಡಿಗೆ ತೆರಳುವ ರೈಲ್ವೇ ಹಳಿ ಸಮೀಪದಲ್ಲಿ ಇಂದು ಬೆಳಿಗ್ಗೆ ಮೃತದೇಹ ಕಂಡುಬಂದಿದೆ. ವ್ಯಕ್ತಿ ಪ್ಯಾಂಟ್ ಹಾಗೂ ಬನಿಯನ್ ಧರಿಸಿದ್ದಾನೆ. ಈತ ಧರಿಸಿದ್ದನೆಂದು ಸಂಶಯಿಸಲಾಗುವ ಅಂಗಿಯನ್ನು ತೆಗೆದಿರಿಸಿದ ಸ್ಥಿತಿಯಲ್ಲಿದೆ. ಸುಮಾರು ೪೫ರ ಹರೆಯದ ವ್ಯಕ್ತಿ ಗಡ್ಡ ಬಿಟ್ಟಿದ್ದಾನೆ. ಪ್ಯಾಂಟ್‌ನ ಜೇಬಿನಿಂದ ವಾಹನದ ಕೀಲಿಕೈ ಹಾಗೂ ಸಿರಿಂಜು ಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಯುವಕ ಯಾವುದಾದರೂ ವಾಹನದಲ್ಲಿ ತಲುಪಿ ಎಲ್ಲಾದರೂ ನಿಲ್ಲಿಸಿರಬಹುದೇ ಎಂಬ ಸಂಶಯದಿಂದ ಸಮೀಪ ಪ್ರದೇಶಗಳಲ್ಲಿ ಶೋಧ ನಡೆಸಿದರೂ ಪತ್ತೆಹಚ್ಚಲಾಗಲಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ. ಮಂಜೇಶ್ವರ ಎಸ್ ಐ ವೈಷ್ಣವ್, ಪ್ರೊಬೆಶನರಿ ಎಸ್‌ಐ ಶಬರಿಕೃಷ್ಣನ್ ಎಂಬವರ ನೇತೃತ್ವದಲ್ಲಿ ಪೊಲೀಸರು ಸ್ಥಳಕ್ಕೆ ತಲುಪಿ ಮೃತದೇಹವನ್ನು ಮಂಗಲ್ಪಾಡಿ ಸರಕಾರಿ ಆಸ್ಪತ್ರೆಗೆ ತಲುಪಿಸಿದ್ದಾರೆ.






