ಕಲ್ಪೆಟ್ಟ: ಸಾರ್ವಜನಿಕರಿಗೆ ಸಂರಕ್ಷಣೆ ಒದಗಿಸಬೇಕಾದ ಪೊಲೀಸರೇ ಪ್ರಯಾಣಿಕರನ್ನು ತಡೆದು ನಿಲ್ಲಿಸಿ ಹಣ ಎಗರಿಸಿದ ಘಟನೆ ಕಲ್ಪೆಟ್ಟದಲ್ಲಿ ನಡೆದಿದೆ. ಈ ಸಂಬಂಧ ವೈತ್ತಿರಿ ಪೊಲೀಸ್ ಠಾಣೆಯ ಸಿವಿಲ್ ಪೊಲೀಸ್ ಆಫೀಸರ್ಗಳಾದ ಕಲ್ಪೆಟ್ಟದ ಅಬ್ದುಲ್ ಶುಕೂರ್ (34), ಕೋಟವಯಲ್ನ ಅಬ್ದುಲ್ ಮಜೀದ್ (44), ಚಾಲಕ ಚಂಗುತ್ತರದ ಬಿನೀಶ್ (44) ಎಂಬಿವರನ್ನು ಕ್ರೈಂಬ್ರಾಂಚ್ ಬಂಧಿಸಿದೆ. ಕಳೆದ ಸೆ.೧೫ರಂದು ಕಾರು ಪ್ರಯಾಣಿಕರನ್ನು ತಡೆದು ನಿಲ್ಲಿಸಿ ಈ ಮೂವರು 3,37,500 ರೂ. ಎಗರಿಸಿರುವುದಾಗಿ ದೂರಲಾಗಿದೆ. ಕಾರಿನಲ್ಲಿ ಹಣ ಸಾಗಿಸಲಾಗುತ್ತಿದೆಯೆಂಬ ಮಾಹಿತಿಯಂತೆ ವೈತ್ತಿರಿ ಪೊಲೀಸ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್ ನೇತೃತ್ವದಲ್ಲಿ ವಾಹನ ತಪಾಸಣೆ ನಡೆಸಲಾಗಿತ್ತು. ಈ ವೇಳೆ ಕೊಂಡೋಟಿ ನಿವಾಸಿಗಳಾದ ಮುಹಮ್ಮದ್ ಜಿನಾಸ್ ಹಾಗೂ ತಂಡ ಕಾರಿನಲ್ಲಿ ತಲುಪಿದ್ದರು. ಪೊಲೀಸರು ಕಾರು ತಡೆದು ನಿಲ್ಲಿಸಿ ಅದರಲ್ಲಿದ್ದವರನ್ನು ಕೆಳಗಿಳಿಸಿದ ಬಳಿಕ ಕಾರಿನಲ್ಲಿದ್ದ ಹಣವನ್ನು ವಶಪಡಿಸಿ ಇದು ಕಾಳಧನವೆಂದು ಬೆದರಿಕೆಯೊಡ್ಡಿ ಕಾರನ್ನು ಮಾತ್ರ ಬಿಟ್ಟುಕೊಟ್ಟಿದ್ದರೆನ್ನಲಾಗಿದೆ.
ಈ ಬಗ್ಗೆ ಮುಹಮ್ಮದ್ ಜಿನಾಸ್ ಪೊಲೀಸರಿಗೆ ದೂರು ನೀಡಿದ್ದರು. ಕೇಸು ದಾಖಲಿಸಿ ತನಿಖೆ ಆರಂಭಿಸಿದ ಪೊಲೀಸರು ಇನ್ಸ್ಪೆಕ್ಟರ್ ಅನಿಲ್ ಕುಮಾರ್ರನ್ನು ತನಿಖಾವಿಧೇಯ ಅಮಾನತುಗೊಳಿಸಲಾಗಿತ್ತು. ಬಳಿಕ ಪ್ರಕರಣವನ್ನು ಕ್ರೈಂಬ್ರಾಂಚ್ಗೆ ಹಸ್ತಾಂತರಿಸಲಾಯಿತು. ಎಸ್ಪಿ ಕೆ.ವಿ. ವೇಣುಗೋಪಾಲ್ ನೇತೃತ್ವದಲ್ಲಿ ತನಿಖೆ ನಡೆಸಿ ಮೂವರು ಪೊಲೀಸರನ್ನು ಬಂಧಿಸಲಾಗಿದೆ. ಬಂಧನ ಸಾಧ್ಯತೆ ತಿಳಿದು ಪೊಲೀಸರು ಹೈಕೋರ್ಟ್ನಿಂದ ನಿರೀಕ್ಷಣಾ ಜಾಮೀನು ಪಡೆದಿದ್ದರು. ಆದ್ದರಿಂದ ಪೊಲೀಸರಿಂದ ಹೇಳಿಕೆ ದಾಖಲಿಸಿ ಬಿಡುಗಡೆಗೊಳಿಸಲಾಗಿದೆ.






