ನವದೆಹಲಿ: ಈ ವರ್ಷ ಭಾರತದ ವಿವಿಧೆಡೆಗಳಲ್ಲಿ ವ್ಯಾಪಕ ಆತ್ಮಾಹುತಿ ಬಾಂಬರ್ ದಾಳಿಗೆ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಯಾದ ಜೈಶ್ ಎ ಮೊಹಮ್ಮದ್ ನೀಲನಕ್ಷೆ ತಯಾರಿಸಿದೆ ಎಂಬ ಆಘಾತಕಾರಿ ಮಾಹಿತಿ ತನಿಖಾ ತಂಡಕ್ಕೆ ಲಭಿಸಿದೆ. ನವದೆಹಲಿಯಲ್ಲಿ ನಡೆದ ಸ್ಫೋಟ ಕೇವಲ ಒಂದು ಟ್ರಯಲ್ ಮಾತ್ರವೇ ಆಗಿತ್ತು. ಭಾರತದಾದ್ಯಂತವಾಗಿ ಇಂತಹ ದಾಳಿ ನಡೆಸುವ ಭಾರೀ ಷಡ್ಯಂತ್ರಕ್ಕೆ ಜೈಶ್ ಎ ಮೊಹಮ್ಮದ್ ರೂಪು ನೀಡಿದೆ ಎಂಬ ಸ್ಪಷ್ಟ ಮಾಹಿತಿ ತನಿಖಾ ತಂಡಕ್ಕೆ ಲಭಿಸಿದೆ.
ಭಯೋತ್ಪಾದಕ ಹಣಕಾಸು ಮತ್ತು ಜಿಹಾದ್ಗಾಗಿ ಜೈಶ್ ಎ ಮೊಹಮ್ಮದ್ ಡಿಜಿಟಲ್ ಕೋರ್ಸ್ ಆರಂಭಿಸಿದೆ. ಭಾರತದ ವಿರುದ್ಧ ಆತ್ಮಹತ್ಯಾದಳವನ್ನು ಸಿದ್ಧಪಡಿಸಲು ಜೈಶ್ ಎ ಮೊಹಮ್ಮದ್ ಹವಾಲ ಮೂಲಕ ದೊಡ್ಡ ಪ್ರಮಾಣದಲ್ಲಿ ಹಣ ಸಂಗ್ರಹಿಸುತ್ತಿದೆ ಎಂಬ ಸ್ಪಷ್ಟ ಮಾಹಿತಿಯೂ ತನಿಖಾ ತಂಡಕ್ಕೆ ಲಭಿಸಿದೆ.
ದೆಹಲಿ ಸ್ಫೋಟ ನಡೆದ 15 ದಿನಗಳ ಹಿಂದೆ ‘ತುಹ್ಫತ್ ಉಲ್ ಮೊಮಿನಾತ್’ ಎಂಬ ಆನ್ಲೈನ್ ಕೋರ್ಸನ್ನು ಜೈಶ್ ಎ ಮೊಹಮ್ಮದ್ ಪ್ರಾರಂಭಿಸಿತ್ತು. ಈ ಕೋರ್ಸ್ ಮಹಿಳೆಯರಿಗಾಗಿ ವಿನ್ಯಾಸಗೊಳಿಸಲಾಗಿದೆ. ಧಾರ್ಮಿಕ ಮತ್ತು ಜಿಹಾದಿ ತರಬೇತಿಯನ್ನು ನೀಡುವುದು ಮತ್ತು ಸಂಘಟನೆಯ ಚಟುವಟಿಕೆಗಳಿಗೆ ಹಣ ಸಂಗ್ರಹಿಸುವುದು ಈ ಆನ್ಲೈನ್ ಕೋರ್ಸ್ನ ಉದ್ದೇಶಗಳಲ್ಲೊಂದಾಗಿದೆ ಎಂಬ ಮಾಹಿತಿಯೂ ತನಿಖಾ ತಂಡಕ್ಕೆ ಲಭಿಸಿದೆ. ಇದಕ್ಕಾಗಿ ವಾಟ್ಸಪ್, ಫೇಸ್ಬುಕ್, ಯೂ-ಟ್ಯೂಬ್ ಮತ್ತು ಟೆಲಿಗ್ರಾಂನAತಹ ಡಿಜಿಟಲ್ ಫ್ಲಾಟ್ಫಾಮ್ಗಳನ್ನು ಬಳಸಲಾಗುತ್ತಿದೆ.
ಈ ಆನ್ಲೈನ್ ಕೋರ್ಸನ್ನು ಉಗ್ರ ಮಸೂದ್ ಅಜರ್ನ ಸಹೋದರಿ ಯರಾದ ಸಾದಿಯಾ ಅಜರ್, ಸಮೀರಾ ಅಜರ್ ಮತ್ತು ಶಿಯಾ ಅಜರ್ ಸೇರಿದಂತೆ ಜೈಶ್ ಎ ಮೊಹಮ್ಮದ್ನ ಉನ್ನತ ಕಮಾಂಡರ್ಗಳ ಮಹಿಳಾ ಸಂಬAಧಿಕರು ನಡೆಸುತ್ತಿದ್ದಾರೆ. ಈ ಕೋರ್ಸ್ ಈಗಾಗಲೇ ಜೈಶ್ನ ಆಂತರಿಕ ಟೆಲಿಗ್ರಾಂ ಮತ್ತು ವಾಟ್ಸಪ್ ಗ್ರೂಪ್ಗಳು ಮತ್ತು ಇತರ ಮೂಲಭೂತ ವೇದಿಕೆಗಳಲ್ಲಿ ರಹಸ್ಯವಾಗಿ ಪ್ರಚಾರ ಮಾಡಲಾಗಿದೆ ಎಂಬ ಮಾಹಿತಿ ತನಿಖಾ ತಂಡಕ್ಕೆ ಲಭಿಸಿದೆ. ಇದನ್ನೆಲ್ಲಾ ಕೇಂದ್ರೀಕರಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಮತ್ತು ಭಯೋತ್ಪಾದಕ ನಿಗ್ರಹ ಪಡೆಗಳು ಸಮಗ್ರ ತನಿಖೆ ಆರಂಭಿಸಿವೆ.







