ಕಾಸರಗೋಡು: ನಾಪತ್ತೆಯಾದ ಯುವಕನ ಮೃತದೇಹ ಬಾವಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ನಗರದ ನಾಗರಕಟ್ಟೆ ಶ್ರೀ ಶಾರದಾ ಭಜನಾ ಮಂದಿರ ಬಳಿಯ ಚಂದ್ರದೇವಿ ಕೃಪಾದ ರಮಾನಂದ-ಆಶಾ ದಂಪತಿ ಪುತ್ರ ಪ್ರಸಾದ್ ನಾಗರಕಟ್ಟೆ (35) ಸಾವನ್ನಪ್ಪಿದ ಯುವಕ. ಕಾರ್ಪೆಂಟರ್ ಕೆಲಸ ನಿರ್ವಹಿಸುತ್ತಿದ್ದ ಪ್ರಸಾದ್ ಶನಿವಾರ ಮಧ್ಯಾಹ್ನ ಸ್ಕೂಟರ್‌ನಲ್ಲಿ ಮನೆಯಿಂದ ಹೊರ ಹೋದವರು ಬಳಿಕ ಹಿಂತಿರುಗಲಿಲ್ಲವೆಂದು ಮನೆಯವರು ಕಾಸರಗೋಡು ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ಪ್ರಕರಣ ದಾಖಲಿಸಿ ಶೋಧ ಆರಂಭಿಸಿರುವಂತೆ ನಿನ್ನೆ ಮಧ್ಯಾಹ್ನ ಕೊರಕ್ಕೋಡು ಬೈಲಿನ ಮನೆಯೊಂದರ ಬಾವಿಯಲ್ಲಿ ಪ್ರಸಾದ್‌ರ ಮೃತದೇಹ ಪತ್ತೆಯಾಗಿದೆ. ವಿಷಯ ತಿಳಿದ ಅಗ್ನಿಶಾಮಕದಳ ತಲುಪಿ ಮೃತದೇಹವನ್ನು ಮೇಲಕ್ಕೆತ್ತಿ ಜನರಲ್ ಆಸ್ಪತ್ರೆಗೆ ಸಾಗಿಸಿದೆ. ಪೊಲೀಸರು ಸಾವಿನ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ಮೃತರು ಹೆತ್ತವರ ಹೊರತಾಗಿ ಸಹೋದರರಾದ ವಿನಯರಾಜ್, ನಿತಿನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






